ಆರಂಭವಾಗಿದೆ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಬೀದರ್ನ ಅಷ್ಟೂರು ಜಾತ್ರೆ: ಹೇಗಿದೆ ನೋಡಿ ಸಂಭ್ರಮ
ಬೀದರ್ ತಾಲೂಕಿನ ಅಷ್ಟೂರು ಗ್ರಾಮದಲ್ಲಿ ನಡೆಯುವ ಅಷ್ಟೂರು ಜಾತ್ರೆ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಅಪರೂಪದ ಭಾವೈಕ್ಯತೆಯನ್ನು ಪ್ರತಿಬಿಂಬಿಸುತ್ತದೆ. ಶತಮಾನಗಳಿಂದ ಆಚರಿಸಲ್ಪಡುವ ಈ ಜಾತ್ರೆಯಲ್ಲಿ ಅಲ್ಲಮಪ್ರಭು ಮತ್ತು ಅಹ್ಮದ್ ಶಾ ವಲಿ ಇಬ್ಬರನ್ನೂ ಭಕ್ತಿಯಿಂದ ಪೂಜಿಸಲಾಗುತ್ತದೆ. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಅದರ ಫೋಟೋಸ್ ಇಲ್ಲಿವೆ.
Updated on:Mar 26, 2025 | 8:58 AM

ಹಿಂದೂ-ಮುಸ್ಲಿಂರ ಧಾರ್ಮಿಕ ಸಾಮರಸ್ಯದ ಸಂಕೇತವಾದ ಬೀದರ್ನ ಅಷ್ಟೂರು ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿದೆ. ಭೇದ-ಭಾವ ಮರೆತು ಹಿಂದೂಗಳು ಅಲ್ಲಮಪ್ರಭು ಮತ್ತು ಮುಸ್ಲಿಂರು ಅಹೆಮದ್ ಶಾ ವಲಿ ಎಂದು ಶತಮಾನಗಳಿಂದ ವಿಜೃಂಭಣೆಯಿಂದ ಜಾತ್ರೆ ಆಚರಿಸುತ್ತಾರೆ. ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಸಾವಿರು ಸಂಖ್ಯೆಯಲ್ಲಿ ಹಿಂದೂ-ಮುಸ್ಲಿಂರು ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ.

ದೇವನೂಬ್ಬ ನಾಮ ಹಲವು ಎಂಬಂತೆ ಬೀದರ್ ತಾಲೂಕಿನ ಅಷ್ಟೂರ ಗ್ರಾಮದ ಅಹ್ಮದ ಶಾ ವಲಿ ಬಹಮನಿ ದರ್ಗಾದ ಗುಂಬಜ್‌ಗಳು ಹಿಂದೂ ಹಾಗೂ ಮುಸ್ಲಿಂ ಸಹೋದರತ್ವ ಸಾರುವ ಪ್ರತೀಕಗಳಾಗಿವೆ. ಈ ದರ್ಗಾದಲ್ಲಿ ಮುಸ್ಲಿಂಮರಿಗೆ ಅಹ್ಮದ ಶಾ ವಲಿ ಆರಾಧ್ಯ ದೈವವಾದರೆ, ಹಿಂದುಗಳಿಗೆ ಅಲ್ಲಮಪ್ರಭುವಾಗಿ ಪೂಜೆ ಪಡೆಯುವುದು ವಿಶೇಷ.

ಹಿಂದು ಮುಸ್ಲಿಂ ಭಾವೈಕ್ಯದಲ್ಲಿ ನಂಬಿಕೆಯಿಟ್ಟಿದ್ದ ಅಹ್ಮದ್ ಶಾ ಅಲಿ ಬಹಮನಿ ಅವರ ಜನ್ಮದಿನ ನಿಮಿತ್ತ ಗೋರಿಯ ಗುಂಬಜ್‌ಗೆ ತೆರಳುವ ಸಾವಿರಾರು ಜನರು ಭಕ್ತಿ ಸಮರ್ಪಣೆ ಮಾಡುವುದು ಹಲವು ಶತಮಾನಗಳಿಂದ ನಡೆದು ಬಂದಿದೆ. ಅಷ್ಟೂರಿನ ಅಲ್ಲಮಪ್ರಭು ದೇವರು ಜಗತ್ತಿಗೆ ಸಹೋದರತೆ, ಸಮಾನತೆಯೊಂದಿಗೆ ಸತ್ಯ ಶುದ್ಧ ಕಾಯಕ ಮತ್ತು ದಾಸೋಹದಂತಹ ಮಹಾನ್ ತತ್ವಗಳನ್ನು ಸಾರಿರುವ ಶರಣ. ಅವರ ಸ್ಮರಣೆಯಲ್ಲೇ ಪ್ರತಿವರ್ಷ ಜಾತ್ರೆ ನಡೆಯುತ್ತದೆ.

ರಾಜ್ಯ, ತೆಲಂಗಾಣ, ಮಹಾರಾಷ್ಟ್ರಗಳಿಂದ ಸಾವಿರಾರು ಭಕ್ತರು ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ. ಇಲ್ಲಿಗೆ ಆಗಮಿಸುವ ಭಕ್ತರು, ದರ್ಗಾಕ್ಕೆ ಹೂವಿನ ಚಾದರ್ ಸಮರ್ಪಿಸುತ್ತಾರೆ. ಅಗರಬತ್ತಿ ಹಚ್ಚಿ ಪೂಚಿಸಿ, ಪ್ರಾರ್ಥಿಸಿ ಅಹ್ಮದ್ ಶಾಹ್‌ಗೆ ನಮಿಸುತ್ತಾರೆ. ಇಲ್ಲಿ ಹಿಂದೂಗಳು ಅಲ್ಲಮಪ್ರಭು ಗುಡಿ ಎಂದೂ, ಮುಸ್ಲಿಮರು ವಲಿ ದರ್ಗಾ ಎಂದೂ ಪರಿಗಣಿಸುವ ಅಹ್ಮದ್ ಶಾಹ್‌ನ ಸಮಾಧಿಯೂ ಅಪರೂಪದ ಭಾವೈಕ್ಯತೆಯ ತಾಣಗಳಲ್ಲೊಂದು ಎನ್ನುತ್ತಾರೆ ಇಲ್ಲಿನ ಭಕ್ತರು.

ಅಷ್ಟಕ್ಕೂ ಈ ದರ್ಗಾದ ಜಾತ್ರೆಗೆ ಚಾಲನೆ ನೀಡುವವರು ಪಕ್ಕದ ಕಲಬುರಗಿ ಜಿಲ್ಲೆಯ ಮಾಡಿಹಾಳ್ ಮತ್ತು ಆಳಂದನ ಅಲ್ಲಮಪ್ರಭು ಮಹಾರಾಜರೆಂದೇ ಗುರುತಿಸಿಕೊಂಡಿರುವ ಗುರುಗಳು. ಪ್ರತಿ ವರ್ಷ ಹೋಳಿ ಹಬ್ಬದ ನಂತರ ನಡೆಯುವ ಜಾತ್ರೆಗೆ ಕಾಲ್ನಡಿಗೆಯಲ್ಲಿಯೇ ಆಗಮಿಸುವ ಗುರುಗಳು ದರ್ಗಾ ಮುಂದೆ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡುತ್ತಾರೆ. ಐದು ದಿನಗಳವರೆಗೆ ನಡೆಯುವ ಈ ಜಾತ್ರೆಯಲ್ಲಿ ಪಟಾಕಿ ಸಿಡಿಸುವುದು ಮತ್ತು ಅಂತಾರಾಜ್ಯ ಕುಸ್ತಿ ಸ್ಪರ್ಧೆ ಏರ್ಪಡಿಸುವದು ತಲೆತಲಾಂತರಗಳಿಂದ ನಡೆದು ಬಂದ ಸಂಸ್ಕೃತಿ.

ದರ್ಗಾ ಮುಂದೆ ಭಕ್ತರು ಎಣ್ಣೆ ದೀಪ ಹಚ್ಚಿ ಭಕ್ತಿ ಸಮರ್ಪಿಸುತ್ತಾರೆ. ಬೀದರ್‌ನಿಂದ 3 ಕಿಮೀ ದೂರದ ಅಷ್ಟೂರು ಗ್ರಾಮ ಪ್ರವೇಶಿಸುವ ಮುನ್ನವೇ ಬಹಮನಿ ಅರಸರ ಗೋರಿಗಳ ಸಾಲು ನೋಡಲು ಸಿಗುತ್ತದೆ. ಇಲ್ಲಿ ಅಲ್ಲಾವುದ್ದಿನ್ ಗೋರಿ, ಸಿಡಿಲ ಹೊಡೆತಕ್ಕೆ ಸಿಲುಕಿ ಅರ್ಧ ಕುಸಿದಿರುವ ಹುಮಾಯೂನ್ ಸಮಾಧಿ, ಅದರ ಪಕ್ಕದಲ್ಲಿಯೇ ಇರುವ ಮಕ್ದುಮ್ ಏ ಜಹಾನ್, ನರ್ಗಿಸ್ ಬೇಗಂ, ನಿಜಾಮ್ ಶಾಹ, ಮಹಮೂದ ಶಾಹ ಬಹಮನಿ, ಮೊಹಮ್ಮದ ಶಾ ಬಹಮನಿ, ಅಹಮದ್ ಶಾ ಬಹಮನಿ, ಅಲ್ಲಾಮುದ್ದೀನ್ ಶಾಹ ಬಹಮನಿ, ವಲಿವುಲ್ಲಾ ಶಾಹ ಬಹಮನಿ, ಖಲೀಮಲ್ಲಾ ಶಾಹ ಬಹಮನಿ ಗೋರಿಗಳಿವೆ. ಅಹಮದ್ ಶಾಹ್‌ನ ಈ ಗೋರಿ ಮೇಲ್ಭಾಗದಲ್ಲಿ ಅಂದರೆ ಗುಂಬಜಿನ ಒಳಭಾಗದಲ್ಲಿ ಚಿನ್ನದ ಲೇಪನ ಹಾಗೂ ವೈವಿಧ್ಯಮಯ ಬಣ್ಣ ಬಳಸಿದ್ದು ಆಕರ್ಷಕವಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತದೆ.

ಪ್ರತಿವರ್ಷ ಹೂಳಿಹುಣ್ಣಿಮೆಯ ನಂತರ ನಡೆಯುವ ಈ ಜಾತ್ರೆ ಹಲವಾರು ವಿಶೇಷತೆಯನ್ನೊಳಗೊಂಡಿದೆ. ಇಲ್ಲಿನ ಹಿಂದೂ-ಮುಸ್ಲಿಂ ಭಾವೈಕತೆಯೆ ಜಾತ್ರೆಗೆ ನೂರಾರು ಹಿಂದೂ-ಮುಸ್ಲಿಂ ಎರಡು ಮೂರು ದಿನ ಇದ್ದು ಜಾತ್ರೆ ಮಾಡಿ ತೆರಳುತ್ತಾರೆ.
Published On - 8:57 am, Wed, 26 March 25



















