- Kannada News Photo gallery Davanagere: Tungabhadra River Drying Up: polluted water also mixing the holy river, taja suddi
ದಾವಣಗೆರೆ: ತುಂಗಭದ್ರೆಯ ಒಡಲು ಖಾಲಿ ಖಾಲಿ, ಪವಿತ್ರ ನದಿಗೆ ಕಲುಷಿತ ನೀರು
ದಾವಣಗೆರೆ ಜಿಲ್ಲೆಯ ತುಂಗಭದ್ರಾ ನದಿ ಬತ್ತುತ್ತಿದೆ. ನದಿಯಲ್ಲಿ ಕೇವಲ 25% ನೀರಿದ್ದು, 60ಕ್ಕೂ ಹೆಚ್ಚು ಹಳ್ಳಿಗಳು ಮತ್ತು ದಾವಣಗೆರೆ ನಗರಕ್ಕೆ ನೀರಿನ ಸಮಸ್ಯೆ ಎದುರಾಗಿದೆ. ಈ ಮಧ್ಯೆ ನದಿಗೆ ಚರಂಡಿ ನೀರು ಸೇರುತ್ತಿರುವುದು. ಇದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
Updated on: Mar 26, 2025 | 10:26 AM

ಇನ್ನು ಬೇಸಿಗೆ ಆರಂಭವಾಗಿಲ್ಲ. ಆದರೂ ಸಹ ತುಂಗಭದ್ರೆಯ ಒಡಲು ಖಾಲಿಯಾಗಿದೆ. ಆ ಮೂಲಕ ಕುಡಿಯುವ ನೀರಿಗಾಗಿ ಆಹಾಕಾರದ ಸೂಚನೆ ಖಚಿತವಾಗಿದೆ. ಹತ್ತಾರು ಕಡೆಗಳಿಂದ ಪುಣ್ಯ ಸ್ನಾನಕ್ಕೆ ಬರುವ ಜನ, ನದಿ ಪಾತ್ರದ ಅರ್ಧದವರೆಗೆ ನಡೆದುಕೊಂಡು ಹೋಗುವಂತಾಗಿದೆ. ಇಂತಹ ಪವಿತ್ರ ನೀರಿಗೆ ಚರಂಡಿ ನೀರು ಬೇರೆ ಸೇರಿಕೊಳ್ಳುತ್ತಿದೆ.

ದಾವಣಗೆರೆ ಜಿಲ್ಲೆಯ ಹರಿಹರ ಬಳಿಯಿರುವ ತುಂಗಭದ್ರ ನದಿಯ ಸ್ಥಿತಿ ಹೀಗಿದೆ. ಪ್ರಖರ ಬೇಸಿಗೆ ಆರಂಭಕ್ಕೂ ಮುನ್ನವೇ ನದಿ ಖಾಲಿಯಾಗುತ್ತಿದೆ. ಕೇವಲ ಶೇಖಡಾ 25ರಷ್ಟು ಮಾತ್ರ ನದಿಯಲ್ಲಿ ನೀರಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ, ಹೊನ್ನಾಳಿ, ಹರಿಹರ ಹೀಗೆ ಮೂರು ತಾಲೂಕಿನ 60ಕ್ಕೂ ಹೆಚ್ಚು ಹಳ್ಳಿಗಳಿಗೆ ಆಸರೆ ಈ ನದಿ.

ಮೇಲಾಗಿ ಪೈಪ್ ಲೈನ್ ಮೂಲಕ ದಾವಣಗೆರೆ ನಗರ, ಜಗಳೂರು ತಾಲೂಕಿನ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜೊತೆಗೆ ಮಾಯಕೊಂಡ ವಿಧಾನಸಭಾ ಕ್ಷೇತ್ರದ 22 ಕೆರೆಗಳಿಗೆ ನೀರು ತುಂಬಿಸುವುದು ಯೋಜನೆ ಜಾರಿಯಲ್ಲಿದೆ. ಆದರೆ ಈಗ ನದಿಯೇ ಖಾಲಿ ಆಗಿದ್ದು, ಭೀಕರ ಬರಗಾಲದ ಸೂಚನೆ ಆರಂಭವಾಗಿದೆ.

ವಿಶೇಷವಾಗಿ ತುಂಗಭದ್ರ ನದಿ ಅಂದರೆ ಒಂದು ಪವಿತ್ರ ಸ್ಥಳ. ತುಂಗೆಭದ್ರೆ ಜೊತೆಯಾಗಿ ಹರಿಯುವ ಸ್ಥಳ. ಜೊತೆಗೆ ಹರಿಹರದಲ್ಲಿ ಹರಿಹರೇಶ್ವರ ದೇವಸ್ಥಾನ ಇದೆ. ಗುರು ರಾಘವೇಂದ್ರ ಮಠ ನದಿ ಪಾತ್ರದಲ್ಲಿಯೇ ಇದೆ. ಇಂತಹ ಪವಿತ್ರ ಸ್ಥಳ ಖಾಲಿ ಖಾಲಿ ಆಗಿದೆ. ಇನ್ನೊಂದು ವಿಚಿತ್ರ ನೋಡಿ ಹರಿಹರದ ನಗರದ ಚರಂಡಿ ನೀರು ಬಂದು ನದಿ ಸೇರುತ್ತಿದೆ.

ಚರಂಡಿ ನೀರು ನದಿ ಸೇರುತ್ತಿದ್ದರು, ಹರಿಹರ ನಗರ ಸಭೆ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಇನ್ನೊಂದು ಕಡೆ ನೂರಾರು ಗ್ರಾಮಗಳಲ್ಲಿ ಭೀಕರ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ ಎಂದು ಜಿಲ್ಲಾಡಳಿತ ಯೋಜನೆ ರೂಪಿಸಿಕೊಳ್ಳುತ್ತಿದೆ.

ಬಹುತೇಕ ಜಿಲ್ಲೆಗಳ ಜೀವನಾಡಿಯಾದ ತುಂಗಭದ್ರ ನದಿ ಖಾಲಿ ಖಾಲಿ ಆಗುತ್ತಿದೆ. ಇದಕ್ಕೆ ಶಿವಮೊಗ್ಗದ ಭದ್ರಾ ಡ್ಯಾಂ ನಿಂದ ನೀರು ಬಿಡಬೇಕು. ಮೇಲಾಗಿ ಹರಿಹರ ತಾಲೂಕಿನ ಕೊನೆಯ ಭಾಗದ ರೈತರಿಗೆ ಭದ್ರಾ ಕಾಲುವೆ ನೀರು ಕೊನೆಯ ಭಾಗಕ್ಕೆ ಬರುತ್ತಿಲ್ಲ. ಪಂಪ್ ಸೆಟ್ ಬಳಸಿ ನೀರು ತೆಗೆಯಲು ನದಿಯಲ್ಲಿ ನೀರಿಲ್ಲ. ಹೀಗಾಗಿ ಸಂಕಷ್ಟದ ಸೂಚನೆ ಸಿಗುತ್ತಿದೆ ಎಂಬುದು ಸ್ಪಷ್ಟವೆನ್ನಲಾಗುತ್ತಿದೆ.



















