ಅಯೋಧ್ಯೆ ರಾಮಮಂದಿರದಲ್ಲಿ ನಿನ್ನೆ(ಜ.22) ರಾಮ ಲಲ್ಲಾನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಈ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂದಾಜು ವೆಚ್ಚ ರೂ. 1,800 ಕೋಟಿ. ಆದ್ದರಿಂದ ಭಾರತದ ಅತ್ಯಂತ ಶ್ರೀಮಂತ ದೇವಾಲಯಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.
ತಿರುಮಲ ತಿರುಪತಿ ವೆಂಕಟೇಶ್ವರ ದೇವಸ್ಥಾನ (ಆಂಧ್ರಪ್ರದೇಶ): ವಿಶ್ವದ ಅತ್ಯಂತ ಶ್ರೀಮಂತ ದೇವಸ್ಥಾನ ಎಂದು ಗುರುತಿಸಲ್ಪಟ್ಟಿರುವ ಈ ದೇವಾಲಯ ತಿರುಮಲ ಬೆಟ್ಟಗಳ ಮಧ್ಯದಲ್ಲಿದೆ. ಪ್ರತಿದಿನ ಇಲ್ಲಿಗೆ 50,000 ಕ್ಕೂ ಹೆಚ್ಚು ಭಕ್ತರು ಮತ್ತು ಸಂದರ್ಶಕರು ಬರುತ್ತಾರೆ. ಇದು 3 ಲಕ್ಷ ಕೋಟಿ ರೂ. ನಿವ್ವಳ ಮೌಲ್ಯವನ್ನು ಹೊಂದಿರುವ ವಿಶ್ವದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ.10 ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯವು 16.2 ಎಕರೆ ಪ್ರದೇಶದಲ್ಲಿ ಹರಡಿದೆ.
ಅನಂತ ಪದ್ಮನಾಭ ಸ್ವಾಮಿ ದೇವಾಲಯ: ಕೇರಳದ ತಿರುವನಂತಪುರಂನಲ್ಲಿರುವ ಈ ದೇವಾಲಯವು 120,000 ಕೋಟಿ ಆಸ್ತಿಯನ್ನು ಹೊಂದಿರುವ ವಿಶ್ವದ ಅತ್ಯಂತ ಶ್ರೀಮಂತ ದೇವಾಲಯವಾಗಿದೆ. ಸಂಪತ್ತುಗಳಲ್ಲಿ ಚಿನ್ನದ ವಿಗ್ರಹಗಳು, ಚಿನ್ನ, ಪಚ್ಚೆಗಳು, ಪುರಾತನ ಬೆಳ್ಳಿ, ವಜ್ರಗಳು ಮತ್ತು ಹಿತ್ತಾಳೆ ಸೇರಿರುವ ಖಜಾನೆ ಕೋಣೆಯನ್ನು ಒಳಗೊಂಡಿದೆ.
ಗುರುವಾಯೂರು ದೇವಸ್ಥಾನ (ಕೇರಳ): ಬಹಳಷ್ಟು ಪವಾಡಗಳಿಗೆ ಸಾಕ್ಷಿಯಾಗಿರುವ ಗುರುವಾಯೂರ್ ಶ್ರೀ ಕೃಷ್ಣ ದೇವಾಲಯವು ಭಾರತದ ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದು. 2022 ರಲ್ಲಿ,ಈ ದೇವಾಲಯವು ರೂ.1,737.04 ಕೋಟಿ ಬ್ಯಾಂಕ್ ಠೇವಣಿ ಹೊಂದಿದೆ ಎಂದು ಬಹಿರಂಗಪಡಿಸಲಾಗಿತ್ತು. ಇದಲ್ಲದೇ ದೇವಾಲಯಕ್ಕೆ 271.05 ಎಕರೆ ಜಮೀನು ಕೂಡ ಇದೆ.
ಗೋಲ್ಡನ್ ಟೆಂಪಲ್,ಪಂಜಾಬ್: ಅಮೃತಸರದ ಹೃದಯಭಾಗದಲ್ಲಿರುವ ಗೋಲ್ಡನ್ ಟೆಂಪಲ್ ದೇಶದ ಅತ್ಯಂತ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಈ ದೇವಾಲಯದ ಮೇಲಿನ ಮಹಡಿಗಳನ್ನು ಮಾಡಲು ಸುಮಾರು 400 ಕೆಜಿ ಚಿನ್ನವನ್ನು ಬಳಸಲಾಗಿದೆ.ದೇಗುಲದ ವಾರ್ಷಿಕ ಆದಾಯ 500 ಕೋಟಿ ರೂ.
ಸೋಮನಾಥ ದೇವಾಲಯ (ಗುಜರಾತ್): ಭಾರತದ ಹನ್ನೆರಡು ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಈ ದೇವಾಲಯ ಮೊದಲನೆಯದು ಎಂದು ನಂಬಲಾಗಿದೆ. ದೇವಾಲಯದ ಸಂಪತ್ತು ಬಹಿರಂಗವಾಗದಿದ್ದರೂ, 1700 ಎಕರೆ ಜಮೀನು ಸೇರಿದಂತೆ ಅದರ ಒಳಭಾಗದಲ್ಲಿ 130 ಕೆಜಿ ಚಿನ್ನ ಮತ್ತು ಅದರ ಶಿಖರದಲ್ಲಿ 150 ಕೆಜಿ ಚಿನ್ನವಿದೆ.
Published On - 2:21 pm, Tue, 23 January 24