ಇದೇನು ನದಿಯೋ ಇಲ್ಲಾ ಮೈದಾವೋ? ಖಾಲಿಯಾದ ಮಲಪ್ರಭೆ
ಬೇಸಿಗೆಯ ತೀವ್ರ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಿರುವಾಗಲೇ ಇತ್ತ ಮಲಪ್ರಭಾ ನದಿ ಒಡಲು ಖಾಲಿಯಾಗುತ್ತಿದೆ. ಖಾಲಿಯಾದ ಮಲಪ್ರಭಾ ನದಿ ಸದ್ಯ ಕ್ರಿಕೆಟ್ ಮೈದಾನವಾಗಿ ಮಾರ್ಪಟ್ಟಿದೆ. ಯುವಕರಿಗೆ ಕ್ರಿಕೆಟ್ ಆಡಲು ಜಾಗ ಸಿಕ್ಕಂತಾಗಿದೆ. ರೈತರು ಮತ್ತು ಜಾನುವಾರುಗಳಿಗೆ ನೀರಿನ ತೀವ್ರ ಅಭಾವ ಉಂಟಾಗಿದೆ.
Updated on:Apr 16, 2025 | 11:05 AM

ಬೇಸಿಗೆ ಬಿರುಬಿಸಿಲಿನಿಂದ ಜನರು ಕಂಗಾಲಾಗಿದ್ದಾರೆ. ಈ ಮಧ್ಯೆ ಜಲಮೂಲಗಳು ಖಾಲಿಯಾಗುತ್ತಿವೆ. ಮಲಪ್ರಭಾ ನದಿ ಒಡಲು ಬರಿದಾಗಿದ್ದು, ಕ್ರಿಕೆಟ್ ಮೈದಾನವಾಗಿ ಬದಲಾಗಿದೆ. ನದಿಯಲ್ಲೇ ಯುವಕರು ಕ್ರಿಕೆಟ್ ಆಡುತ್ತಿದ್ದು, ನದಿ ಒಡಲು ಎಷ್ಟರ ಮಟ್ಟಿಗೆ ಖಾಲಿಯಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕಮತಗಿ ಪಟ್ಟಣದ ವ್ಯಾಪ್ತಿಯ ಮಲಪ್ರಭಾ ನದಿಯಲ್ಲಿ ನೀರು ಖಾಲಿಯಾದ ಹಿನ್ನೆಲ್ಲ ಯುವಕರು ಕ್ರಿಕೆಟ್ ಆಡುತ್ತಿದ್ದಾರೆ. ಅಷ್ಟೇ ಅಲ್ಲದೆ ಲಾರಿ ಕೂಡ ತೊಳೆಯಲಾಗುತ್ತಿದೆ. ಅಲ್ಲಲ್ಲಿ ತಗ್ಗುಗುಂಡಿಗಳಲ್ಲಿ ನೀರು ನಿಂತಿರುವುದು ಬಿಟ್ಟರೆ ಮಲಪ್ರಭಾ ನದಿ ಒಡಲು ಬರಿದಾಗಿದೆ.

ಮಲಪ್ರಭಾ ನದಿ ಬಾಗಲಕೋಟೆ ಜಿಲ್ಲೆಯ ಬಾದಾಮಿ, ಹುನಗುಂದ, ಇಳಕಲ್, ಗುಳೇದಗುಡ್ಡ ಭಾಗದಲ್ಲಿ ಹರಿಯುತ್ತದೆ. ನದಿಯನ್ನು ನಂಬಿಕೊಂಡು ರೈತರು ಕೃಷಿ ಮಾಡುತ್ತಾರೆ. ನದಿ ಅಕ್ಕಪಕ್ಕದ ಜಮೀನು ಸದ್ಯಕ್ಕೆ ಹಸಿರಿನಿಂದ ಕೂಡಿದ್ದರೂ, ಇನ್ನೇನು ಕೆಲ ದಿನದಲ್ಲಿ ಬೆಳೆಯೆಲ್ಲಾ ಒಣಗಿ ಹಾಳಾಗಲಿದೆ. ಏಕೆಂದರೆ ನದಿಯಲ್ಲಿ ನೀರು ಖಾಲಿಯಾಗಿದೆ. ಅಲ್ಲಲ್ಲಿ ತಗ್ಗು ಗುಂಡಿಗಳಲ್ಲಿ ಇದ್ದ ನೀರು ಕೂಡ ತಳಮಟ್ಟಕ್ಕೆ ಇಳಿದಿದೆ.

ಇನ್ನು ಇದಷ್ಟೇ ಅಲ್ಲದೆ ಕೂಡಲಸಂಗಮ ಪ್ರದೇಶದಲ್ಲೂ ಮಲಪ್ರಭಾ ನದಿ ಖಾಲಿಯಾಗಿದೆ. ಅಲ್ಲಿ ಕೂಡ ಕೇವಲ ತಗ್ಗು ಪ್ರದೇಶದಲ್ಲಿ ನೀರು ನಿಂತಿರೋದನ್ನು ಬಿಟ್ಟರೆ ಬಹುತೇಕ ನದಿ ಖಾಲಿಯಾಗಿದೆ. ನದಿ ಒಡಲು ಬಿರುಕು ಬಿಟ್ಟಿದ್ದು, ಜಲಕ್ಷಾಮ ಎದುರಾಗುವ ಮುನ್ಸೂಚನೆ ಕಾಣಿಸುತ್ತಿದೆ.

ಮಲಪ್ರಭಾ ನದಿ ಖಾಲಿಯಾಗುತ್ತಿರುವುದರಿಂದ ಜನ ಜಾನುವಾರುಗಳಿಗೆ, ಕೃಷಿಗೆ ನೀರಿನ ಸಮಸ್ಯೆ ಎದುರಾಗಲಿದೆ. ಜೊತೆಗೆ ಜಲಚರ ಜೀವಿಗಳಿಗೂ ಸಂಕಷ್ಟ ಎದುರಾಗಲಿದೆ. ಆದ್ದರಿಂದ ಹೆಚ್ಚಿನ ಪ್ರಮಾಣದ ನೀರನ್ನು ನವಿಲುತೀರ್ಥ ಜಲಾಶಯದಿಂದ ಹರಿಸು ಮೂಲಕ ರೈತರು, ಜಾನುವಾರುಗಳು, ಜಲಚರಗಳಿಗೆ ಅನುಕೂಲ ಕಲ್ಪಿಸುವಂತೆ ಆಗ್ರಹ ಕೇಳಿಬರುತ್ತಿದೆ.

ಒಟ್ಟಿನಲ್ಲಿ ಬೇಸಿಗೆಯಲ್ಲಿ ಮಲಪ್ರಭಾ ನದಿ ಖಾಲಿಯಾಗಿದ್ದು, ನದಿ ತೀರದ ಜನರಿಗೆ ಸಂಕಷ್ಟ ತಂದೊಡ್ಡಿದೆ. ಈಗಾಗಲೇ ನವಿಲುತೀರ್ಥ ಜಲಾಶಯದಿಂದ ಹೆಚ್ಚಿನ ನೀರು ಹರಿಸಬೇಕೆಂಬ ಇವರ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಾ ನೋಡಬೇಕು.
Published On - 11:04 am, Wed, 16 April 25



















