- Kannada News Photo gallery Bandipur National Park Revives: Monsoon Brings Life Back to Drought Hit Sanctuary
ವರ್ಷದ ಮೊದಲ ಮಳೆಗೆ ಬಂಡೀಪುರ ಹಸಿರುಮಯ: ಕೆರೆಗಳು ಭರ್ತಿ, ಸಫಾರಿಗೆ ಒಳ್ಳೆ ಸಮಯ
ಈಗ ಭಾರೀ ಮಳೆಯಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಸಿರಿನಿಂದ ತುಂಬಿದೆ. ಬರಿದಾಗಿದ್ದ ಕೆರೆ-ಕಟ್ಟೆಗಳು ಮತ್ತೆ ತುಂಬಿವೆ, ಮತ್ತು ಕಾಡು ಪ್ರಾಣಿಗಳು ಮರಳಿ ಬಂದಿವೆ. ಪೂರ್ವ ಮುಂಗಾರು ಮಳೆಯು ಬಂಡೀಪುರಕ್ಕೆ ಜೀವ ತುಂಬಿದೆ. ಇದು ಸಫಾರಿ ಪ್ರವಾಸಕ್ಕೆ ಅತ್ಯುತ್ತಮ ಸಮಯವಾಗಿದೆ. ಕಾಡು ಪ್ರಾಣಿಗಳಿಗೆ ನೀರಿನ ಸಮಸ್ಯೆ ದೂರವಾಗಿದೆ.
Updated on: Jun 01, 2025 | 4:29 PM

ಕಳೆದೊಂದು ವರ್ಷದಿಂದ ಸಕಾಲಕ್ಕೆ ಮಳೆಯಾಗದ ಹಿನ್ನೆಲೆಯಲ್ಲಿ ತೀವ್ರ ಬರದಿಂದ ಬಂಡೀಪುರ ಕಾಡು ಸಂಪೂರ್ಣವಾಗಿ ಒಣಗಿ ಹೋಗಿತ್ತು. ಆದರೆ, ಪೂರ್ವ ಮುಂಗಾರು ಮಳೆಗೆ ಬಂಡೀಪುರ ಸಂಪೂರ್ಣ ಹಸಿರುಮಯವಾಗಿದ್ದು, ಕೆರೆ-ಕಟ್ಟೆಗಳಿಗೆ ಜೀವ ಕಳೆ ಬಂದಿದೆ. ಕಾಡು ಪ್ರಾಣಿಗಳಿಗಿದ್ದ ಕಂಟಕ ಈಗ ದೂರವಾಗಿದೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದೊಂದು ವರ್ಷದಿಂದ ಸಕಾಲಕ್ಕೆ ಮಳೆಯಾಗಿರಲಿಲ್ಲ. ಕಾಡು ಒಣಗಿತ್ತು. ಕೆರೆ ಕಟ್ಟೆಗಳೆಲ್ಲ ಬರಿದಾಗಿದ್ದವು. ಇದರಿಂದ ಕಾಡು ಪ್ರಾಣಿಗಳಿಗೆ ಸಂಕಷ್ಟ ಎದುರಾಗಿತ್ತು.

ಆದರೆ, ಈ ವರ್ಷ ಭಾರಿ ಪೂರ್ವ ಮುಂಗಾರು ಮಳೆಯಾಗಿದೆ. ಈ ಹಿನ್ನಲೆ ಬಂಡೀಪುರ ಅಭಯಾರಣ್ಯ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇದು ಸಫಾರಿಗೆ ಸೂಕ್ತ ಸಮಯವಾಗಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 400 ಕ್ಕೂ ಅಧಿಕ ಕೆರೆ ಕಟ್ಟೆಗಳಿವೆ. ಕಳೆದ ವರ್ಷ ಭಾರಿ ಬರಗಾಲ ಎದುರಾಗಿದ್ದು ಶೇ 90 ರಷ್ಟು ಕೆರೆಗಳು ಬತ್ತಿ ಹೋಗಿದ್ದವು. ಬೆರೆಳೆಣಿಕೆಯಷ್ಟು ಕೆರೆಗಳಿಗೆ ಮಾತ್ರ ಸೋಲಾರ್ ಬೋರ್ನಿಂದ ನೀರು ತುಂಬಿಸುವ ಕಾರ್ಯವನ್ನು ಅರಣ್ಯಾಧಿಕಾರಿಗಳು ಮಾಡಿದ್ದರು. ಆದರೆ, ಅದು ಅಷ್ಟರ ಮಟ್ಟಿಗೆ ಯಶಸ್ವಿ ಕೂಡ ಆಗಿರಲಿಲ್ಲ.

ನೀರಿನ ಅಭಾವದಿಂದ ಕಾಡು ಪ್ರಾಣಿಗಳೆಲ್ಲ ನೀರು ಅರಸಿ ಬಂಡೀಪುರ ತೊರೆದಿದ್ದವು. ಆದರೆ, ವರ್ಷದ ಮೊದಲ ಮಳೆ ಉತ್ತಮವಾಗಿದ್ದು ಕೆರೆ ಕಟ್ಟೆಗಳು ತುಂಬುತ್ತಿದ್ದು ಜೀವ ಕಳೆ ಮರುಕಳಿಸಿದೆ. ಪ್ರಾಣಿಗಳೆಲ್ಲ ಮತ್ತೆ ಬಂಡೀಪುರ ಅರಣ್ಯಕ್ಕೆ ಆಗಮಿಸಿವೆ.

ಒಟ್ಟಾರೆಯಾಗಿ ಮೊದಲ ಮಳೆ ಉತ್ತಮವಾಗಿದ್ದು, ಮೂಲೆ ಹೊಳೆ ಸೇರಿದಂತೆ ತಮಿಳುನಾಡು ಹಾಗೂ ಕೇರಳ ಗಡಿಯಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು ಕಾಡು ಹಚ್ಚ ಹಸಿರಾಗಿ ಕಂಗೊಳಿಸುತ್ತಿದೆ. ಪ್ರಾಣಿಗಳಿಗಿದ್ದ ನೀರಿನ ಸಮಸ್ಯೆ ದೂರವಾಗಿದೆ.



