- Kannada News Photo gallery Banjara Embroidery Revival: Bengaluru NIFT Students Study Vijayapura's Ancient Banjara Craft
ಬಂಜಾರ ವೇಷಭೂಷಣ ಅಧ್ಯಯನಕ್ಕಾಗಿ ವಿಜಯಪುರದಲ್ಲಿ ಬೀಡು ಬಿಟ್ಟ ಸಿಟಿ ವಿದ್ಯಾರ್ಥಿಗಳು
ಬಂಜಾರ ಅಥವಾ ಲಂಬಾಣಿ ಎಂದರೆ ಸಾಕು ಅವರ ವೇಷಭೂಷಣಗಳು ಎಲ್ಲರ ಕಣ್ಣೆದುರಿಗೆ ಬರುತ್ತವೆ. ಕಾಸು, ಕನ್ನಡಿಗಳು, ಕುಸುರಿ ಕಲೆಗಳಿಂದ ಅಲಂಕಾರ ಮಾಡಿರುವ ಲಂಬಾಣಿಗರ ಉಡುಗೆ ತೊಡುಗೆಗಳೇ ಚೆಂದ. ಜಾಗತೀರಕರಣದ ಪ್ರಭಾವದಿಂದ ಬಂಜಾರಾ ಕಲೆ ಸಾಂಪ್ರದಾಯಿಕ ಉಡುಪು ಬದಲಾಗಿ ನಶಿಸಿ ಹೋಗುತ್ತಿದೆ. ಇಂಥಹ ಬಂಜಾರ ಕಲೆ ಕುಸುರಿ ಉಳಿವಿಕೆ ಹಾಗೂ ಪುನಶ್ಚೇತನಕ್ಕಾಗಿ ಬೆಂಗಳೂರಿನ ವಿದ್ಯಾರ್ಥಿಗಳ ದಂಡು ವಿಜಯಪುರ ಜಿಲ್ಲೆಯ ಲಂಬಾಣಿ ತಾಂಡಾಗಳಲ್ಲಿ ಬೀಡು ಬಿಟ್ಟಿದೆ.
Updated on:Jul 16, 2025 | 7:59 PM

ವಿಜಯಪುರ ಜಿಲ್ಲೆಯ ಲಂಬಾಣಿ ಸಮುದಾಯದ ಪ್ರಾಚೀನ ಕರಕುಶಲ ಸಾಂಪ್ರದಾಯಿಕ ಕಸೂತಿ ಕಲೆಯನ್ನು ಪುನಶ್ಚೇತನಗೊಳಿಸುವ ಹೊಂಗನಿಸಿನಿಂದ ಪ್ರಾರಂಭವಾದ ಬಂಜಾರ ಕಸೂತಿ ಸಂಸ್ಥೆಯ ಚಟುವಟಿಕೆಗಳು ಫಲ ನೀಡುತ್ತಿವೆ. ಸಂಸ್ಥೆಯ ಪ್ರಯತ್ನದಿಂದ ಬೆಂಗಳೂರಿನಲ್ಲಿರುವ ನ್ಯಾಶನಲ್ ಇನಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ(ಎನ್ ಐ ಎಫ್ ಟಿ) ವಿದ್ಯಾರ್ಥಿಗಳು ಕ್ಷೇತ್ರ ಅಧ್ಯಯನಕ್ಕಾಗಿ ವಿಜಯಪುರಕ್ಕೆ ಆಗಮಿಸಿದ್ದಾರೆ.

ಮರೆಯಾಗುತ್ತಿದ್ದ ಮತ್ತು ಈ ಭಾಗದಲ್ಲಿ ಪ್ರಾಚೀನ ಕಾಲದಿಂದಲೂ ಲಂಬಾಣಿ ಸಮುದಾಯದ ಜನತೆ ಬಳಸುವ ಉಡುಗೆ ತೊಡುಗೆಗಳನ್ನು ತಯಾರಿಸುವ ಕಸೂತಿ ಕಲೆಯನ್ನು ಉಳಿಸಿ, ಬೆಳಿಸಲು ಸಚಿವ ಎಂಬಿ ಪಾಟೀಲರ ಪತ್ನಿ ಆಶಾ ಪಾಟೀಲ ಅವರ ಪ್ರೋತ್ಸಾಹದೊಂದಿಗೆ ಬಂಜಾರ ಕಸೂತಿ ಸಂಸ್ಥೆ ಸ್ಥಾಪನೆ ಮಾಡಲಾಗಿದೆ. ಬಂಜಾರ ಕಸೂತಿ ಸಂಸ್ಥೆಯ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಜವಳಿ ಇಲಾಖೆಗೆ ಸೇರಿರುವ ಬೆಂಗಳೂರಿನ ಎನ್ಐಎಫ್ಟಿ (National Institute of Fashion Technology) ನಿಟವೆರ್ ಡಿಸೈನಿಂಗ್ ವಿಭಾಗದ 38 ಜನ ವಿದ್ಯಾರ್ಥಿಗಳು ಕ್ಷೇತ್ರ ಅಧ್ಯಯನಕ್ಕಾಗಿ ವಿಜಯಪುರಕ್ಕೆ ಆಗಮಿಸಿದ್ದಾರೆ.

ಲಂಬಾಣಿ ತಾಂಡಾಗಳಿಗೆ ತೆರಳಿ ಬಂಜಾರ ಸಮುದಾಯದ ಮಹಿಳೆಯರನ್ನು ಭೇಟಿ ಮಾಡಿ ಕಸೂತಿ ಕಲೆಯ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಇವರಿಗೆ ಬಂಜಾರ ಕಸೂತಿ ಸಂಸ್ಥೆಯ ಸಿಬ್ಬಂದಿ ಅಧ್ಯಯನಕ್ಕೆ ಮಾರ್ಗದರ್ಶನ ಮತ್ತು ಸಹಾಯ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ತಾಂಡಾಗಳಿಗಳಲ್ಲಿ ಕಸೂತಿ ಅಧ್ಯಯನ, ಅಲ್ಲಿನ ನಿವಾಸಿಗಳ ಜೀವನ ಶೈಲಿ, ಕಲೆಯ ಬಗ್ಗೆ ಆಧ್ಯಯನ ಮಾಡುತ್ತಿದ್ದಾರೆ.

ದೂರದ ಬೆಂಗಳೂರಿನಿಂದ ವಿಜಯಪುರಕ್ಕೆ ಬಂದಿರುವ ವಿದ್ಯಾರ್ಥಿಗಳು ನಮ್ಮ ಪಾರಂಪರಿಕ ಸೂಜಿ ಕಸೂತಿ ಕಲೆಯನ್ನು ಕಲಿಯುತ್ತಿರುವುದು ಸಂತಸ ತಂದಿದೆ. ನಮ್ಮ ಮಕ್ಕಳು ಈ ಕಲೆಯನ್ನು ಮುಂದುವರೆಸಲು ಹಿಂಜರಿಯುತ್ತಿರುವಾಗ ದೂರದಿಂದ ಬಂದಿರುವ ವಿದ್ಯಾರ್ಥಿಗಳು ಕಸೂತಿಯ ಭಾಗವಾದ ಗಾಜು ಕಟ್ಟುವುದು, ಎಲೆ ಹಾಕುವುದು, ಹೊಲಿಗೆ ಹಾಕುವುದನ್ನು ಕಲಿಸಿದ್ದೇವೆ. ಅವರೂ ಖುಷಿಯಿಂದ ಕಲಿತಿದ್ದಾರೆ. ಅವರ ಆಸಕ್ತಿ ನಮಗೆ ಅಚ್ಚರಿಯಷ್ಟೇ ಅಲ್ಲ, ತುಂಬಾ ಖುಷಿ ತಂದಿದೆ ಎಂದು ತಾಂಡಾ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಬಂಜಾರ ಕಲೆ ಕಸೂರಿ ವೇಷಭೂಷಣಗಳ ಬಗ್ಗೆ ಆಧ್ಯಯನಕ್ಕಾಗಿ ಬಂದಿರುವ ಎನ್ಐಎಫ್ಟಿಯ ನಿಟವೇರ್ ಡಿಪಾರ್ಟಮೆಂಟ್ ಆಫ್ ನಿಟ್ ವೇರ್ ಡಿಸೈನ್ ವಿದ್ಯಾರ್ಥಿನಿಗಳು ಸಹ ಸಂತಸ ವ್ಯಕ್ತಪಡಿಸಿದ್ಧಾರೆ. ಬಂಜಾರ ಕಸೂತಿ ಸಂಸ್ಥೆ ನಮಗೆ ತುಂಬಾ ಸಹಾಯ ಮಾಡಿದೆ. ಇಲ್ಲಿನ ಬಂಜಾರ ಮಹಿಳೆಯರು ಕೈಗೊಳ್ಳುವ ಹೊಲಿಗೆಯಿಂದ ಆಕರ್ಷಿತರಾಗಿದ್ದೇವೆ ಎಂದರು.

ಅಲ್ಲದೆ, ನಮಗೆ ಭವಿಷ್ಯದಲ್ಲಿ ಕೋರ್ಸಿಗಷ್ಟೇ ಅಲ್ಲ, ನಮ್ಮ ಪ್ರಾಜೆಕ್ಟ್ಗೂ ಇಲ್ಲಿನ ಅಧ್ಯಯನ ಅನುಕೂಲವಾಗಲಿದೆ. ಈ ಕಲೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶವಿದೆ. ಬಂಜಾರ ಕಲೆ, ಕಸೂತಿ, ಸಾಂಪ್ರಾಯಿಕ ವೇಷ ಉಳಿಸಿ ಬೆಳೆಸಿ ಜಾಗತೀಕ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಗುರಿ ಹೊಂದಿದ್ದೇವೆ ಎಂದು ಸಂತಸ ಹಂಚಿಕೊಂಡಿದ್ದಾರೆ.

2017 ರಲ್ಲಿ ಲಾಭ ರಹಿತವಾದ ಉದ್ದೇಶದಿಂದ ಆರಂಭವಾದ ಬಂಜಾರ ಕಸೂತಿ ಸಂಸ್ಥೆ ಇದೀಗ ಎನ್ಐಎಫ್ಟಿಯ ನಿಟವೇರ್ ಡಿಪಾರ್ಟಮೆಂಟ್ ಆಫ್ ನಿಟ್ ವೇರ್ ಡಿಸೈನ್ ವಿದ್ಯಾರ್ಥಿಗಳಿಗೆ ಬಂಜಾರ ಕಲೆ ಕಸೂತಿಗಳ ವೇಷಭೂಷಣಗಳ ಅಧ್ಯಯನ, ತಯಾರಿಕೆ ಮಾಡುವುದನ್ನು ಕಲಿಸುತ್ತಿದೆ. ಬಂಜಾರ ಕಲೆಗಳನ್ನು ಕಸೂತಿಗಳನ್ನು ಉಳಿಸಿ ಬೆಳೆಸಲು ಹಾಗೂ ಬಂಜಾರ ಮಹಿಳೆಯರನ್ನಾ ಸ್ವಾವಲಂಬಿಗಳನ್ನಾಗಿ ಮಾಡುವುದೇ ಪ್ರಮುಖ ಉದ್ದೇಶವಾಗಿದೆ.
Published On - 7:57 pm, Wed, 16 July 25



