- Kannada News Photo gallery Bendbenbali's Bulls Stone Pulling Festival: Yadagiri's Unique Rural, Kannada News
ಯಾದಗಿರಿಯ ಗ್ರಾಮೀಣ ಕ್ರೀಡೆ: ಎತ್ತುಗಳು ಕಲ್ಲು ಎಳೆಯುವ ಸ್ಪರ್ಧೆ; ಫೋಟೋಸ್ ನೋಡಿ
ಆಧುನಿಕ ಜಗತ್ತಿನಲ್ಲಿ ಹಳೇ ಸಂಪ್ರದಾಯಗಳು ಮರೆಮಾಚಿ ಹೋಗುತ್ತಿವೆ. ಹಳೇ ಕ್ರೀಡೆಗಳು ಮಾಯವಾಗಿ ಹೊಸ ಜಮಾನ ಶುರುವಾಗಿದೆ. ಆದರೆ ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಬೆಂಡೆಬೆಂಬಳಿ ಗ್ರಾಮದಲ್ಲಿ ಎತ್ತುಗಳ ಶಕ್ತಿ ಪ್ರದರ್ಶನಕ್ಕಾಗಿ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ.
Updated on:Nov 25, 2024 | 2:07 PM

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಬೆಂಡೆಬೆಂಬಳಿ ಗ್ರಾಮದ ಜಮಾಲೋದ್ದೀನ್ ದರ್ಗಾದ ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮೀಣ ಸೊಗಡಿನ ಕಲ್ಲು ಎಳೆಯುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಸಂಗ್ರಣಿ ಕಲ್ಲನ್ನು ಫೈಲ್ವಾನರ ಮೂಲಕ ಎತ್ತುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗುತ್ತೆ. ಆದರೆ, ಈ ಜಾತ್ರೆಯಲ್ಲಿ ಮಾತ್ರ ಭಾರವಾದ ಕಲ್ಲನ್ನಯ ಎತ್ತುಗಳ ಮೂಲಕ ಎಳೆಯುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು.

ಇದೇ ಕಾರಣಕ್ಕೆ ಯಾದಗಿರಿ ಜಿಲ್ಲೆ ಸೇರಿದಂತೆ ಪಕ್ಕದ ರಾಯಚೂರು, ವಿಜಯಪುರ, ಬಾಗಲಕೋಟ ಸೇರಿದಂತೆ ರಾಜ್ಯದ ನಾನಾ ಭಾಗದಿಂದ ಬಂದಿದ್ದ ಎತ್ತುಗಳನ್ನು ಸ್ಪರ್ಧೆಗೆ ಇಳಿಸಲಾಗಿತ್ತು. ಸುಮಾರು ನೂರು ಮೀಟರ್ನ ಮೈದಾನವನ್ನು ತಯಾರಿ ಮಾಡಲಾಗಿತ್ತು. ಸುಮಾರು ಒಂದುವರೆ ಟನ್ ಕಲ್ಲನ್ನು ತಯಾರು ಮಾಡಲಾಗಿತ್ತು. ಜೋಡಿಎತ್ತು ಮೈದಾನಕ್ಕೆ ಇಳಿಸಲಾಗಿ ಬಳಿಕ ಕಲ್ಲನ್ನು ಕಟ್ಟಲಾಗುತ್ತೆ.

ನಂತರ, ಎತ್ತುಗಳು ಭಾರವಾದ ಕಲ್ಲನ್ನ ಎಳೆಯುತ್ತವೆ. ಎತ್ತುಗಳು ಕಲ್ಲನ್ನು ಎಳೆಯುವಾಗ ನೆರೆದ ಸಾವಿರಾರು ಜನ ಶಿಳ್ಳೆ, ಚಪ್ಪಾಳೆ, ಕೇಕೆ ಹಾಕಿ ಎತ್ತುಗಳನ್ನ ಹುರಿದುಂಬಿಸುತ್ತಾರೆ. ನೂರು ಮೀಟರ್ ಮೈದಾನದಲ್ಲಿ ಯಾವ ಜೋಡಿಎತ್ತು ಎಷ್ಟು ರೌಂಡ್ಸ್ ಹಾಕುತ್ತೆ ಅಂತೆ ಕೌಂಟ್ ಮಾಡಲಾಗುತ್ತೆ. ಯಾವ ಎತ್ತಿನ ಜೋಡಿ ಅತಿ ಹೆಚ್ಚು ರೌಂಡ್ಸ್ ಹಾಕುತ್ತೆ ಅದು ವಿಜಯಶಾಲಿ ಎಂದು ಘೋಷಣೆ ಮಾಡಲಾಗುತ್ತೆ.

ಕೇವಲ ಮೊದಲ ಬಹುಮಾನ ಮಾತ್ರ ಅಲ್ಲದೆ ನಾಲ್ಕನೇ ಸ್ಥಾನಕ್ಕೆ ಬರುವ ಎತ್ತುಗಳಿಗೂ ಸಹ ಬಹುಮಾನ ನೀಡಲಾಗುತ್ತೆ. ಸಾಮಾನ್ಯವಾಗಿ ಎತ್ತುಗಳು ಅಂದರೆ ಕೃಷಿ ಕಾರ್ಯಕ್ಕೆ ಬಳಕೆ ಮಾಡಲಾಗುತ್ತೆ. ಆದರೆ, ಈ ಸ್ಪರ್ಧೆಯಲ್ಲಿ ಭಾಗವಹಿಸುವ ಎತ್ತುಗಳನ್ನು ಯಾವ ಕೆಲಸಕ್ಕೂ ಬಳಸುವುದಿಲ್ಲ.

ಎತ್ತುಗಳನ್ನು ಮಾಲೀಕರು ಮಕ್ಕಳ ತರಹ ನೋಡಿಕೊಳ್ಳುತ್ತಾರೆ. ಮಕ್ಕಳನ್ನು ಫೈಲ್ವಾನರಾಗಿ ಮಾಡಲು ಪೋಷಕರು ಪಡುವ ಶ್ರಮದ ರೀತಿ ಈ ಎತ್ತುಗಳನ್ನ ಬೆಳೆಸುತ್ತಾರೆ. ಪ್ರತಿ ತಿಂಗಳು ಏನಿಲ್ಲ ಅಂದರೆ, 30 ರಿಂದ 40 ಸಾವಿರ ರೂ. ಎತ್ತುಗಳಿಗಾಗಿ ಖರ್ಚು ಮಾಡುತ್ತಾರೆ. ಅದರಲ್ಲೂ, ನಿತ್ಯ ಫೈಲ್ವಾನರರು ಯಾವ ರೀತಿ ಮೊಟ್ಟೆ ತಿನ್ನುತ್ತಾರೆ ಅದೆರೀತಿ ನಿತ್ಯ ಎತ್ತುಗಳಿಗೆ ಮೊಟ್ಟೆ ನೀಡಲಾಗುತ್ತೆ.

ಈ ಎತ್ತುಗಳು ಸಾಮಾನ್ಯ ಕೃಷಿ ಕಾಯಕ ಮಾಡುವ ಎತ್ತುಗಳಿಗಿಂತ ಮೂರ್ನಾಲ್ಕು ಪಟ್ಟು ಶಕ್ತಿ ಶಾಲಿಯಾಗಿರುತ್ತವೆ. ಎರಿ ಮಣ್ಣಿನ ಭೂಮಿಯಲ್ಲಿ 15 ಕ್ವಿಂಟಲ್ನ ಕಲ್ಲು ಎಳೆಯಬೇಕು ಅಂದರೆ ಸಾಮಾನ್ಯ ಮಾತಲ್ಲ. ಶಕ್ತಿ ಶಾಲಿ ಎತ್ತುಗಳು ಇದ್ದರೆ ಮಾತ್ರ ಸಾಧ್ಯ.

ಸಾಮಾನ್ಯವಾಗಿ ಎತ್ತುಗಳು 1 ರಿಂದ 2 ಲಕ್ಷ ರೂ. ಕೊಟ್ಟರೆ ಜೋಡಿಎತ್ತು ಸಿಗುತ್ತವೆ. ಆದರೆ, ಈ ಸ್ಪರ್ಧೆಯಲ್ಲಿ ಭಾಗವಹಿಸುವ ಎತ್ತಗಳನ್ನು ಸುಮಾರು 7 ರಿಂದ 8 ಲಕ್ಷ ರೂ.ಗೆ ಮಾರಾಟವಾಗುತ್ತವೆ.

ಹಳೆ ಕಾಲದ ಸ್ಪರ್ಧೆಗಳು ನಶಿಸಿ ಹೋಗುತ್ತಿವೆ. ಗ್ರಾಮೀಣ ಕ್ರೀಡೆಗಳು ಮರೆಮಾಚುತ್ತಿವೆ. ಆದರೆ, ಗ್ರಾಮೀಣ ಭಾಗದ ಜನ ಇಂತಹ ಸ್ಪರ್ಧೆಗಳನ್ನು ಆಯೋಜನೆ ಮಾಡುವ ಮೂಲಕ ಹಳೆ ಕಾಲದ ಕಲೆ ಹಾಗೂ ಕ್ರೀಡೆಯನ್ನು ಉಳಿಸುತ್ತಿದ್ದಾರೆ.
Published On - 2:06 pm, Mon, 25 November 24



