ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಜನವೋ ಜನ, ಬಿಸಿ ಬಿಸಿ ಕಡಲೆಕಾಯಿ ಸವಿದು ಜನ ಫುಲ್ ಖುಷ್
Basavanagudi Kadalekai parishe: ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಇಂದಿನಿಂದ ಡಿ.13ರ ವರೆಗೆ ಅಂದ್ರೆ ಮೂರು ದಿನಗಳ ಕಾಲ ಪರಿಷೆ ನಡೆಯಲಿದೆ. ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಮೂಲಕ ಪರಿಷೆಗೆ ಚಾಲನೆ ನೀಡಲಾಯಿತು.
Updated on: Dec 11, 2023 | 2:07 PM

ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆಗೆ ಅಧಿಕೃತ ಚಾಲನೆ ಸಿಕ್ಕಿದೆ. ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಮೂಲಕ ಬಡವನಗುಡಿ ಕಡಲೆಕಾಯಿ ಪರಿಷೆಗೆ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರವಿಸುಬ್ರಹ್ಮಣ್ಯ, ಉದಯ್ ಗರುಡಾಚಾರ್ ಚಾಲನೆ ನೀಡಿದ್ದಾರೆ. ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಟಿ.ಎ.ಶರವಣ ಉಪಸ್ಥಿತರಿದ್ದರು.

ದೊಡ್ಡಗಣಪನಿಗೆ ವಿಶೇಷ ಬೆಣ್ಣೆ ಅಲಂಕಾರ ಮಾಡಲಾಗಿದೆ. 75 ಕೆಜಿ ಬೆಣ್ಣೆಯಿಂದ ಅಲಂಕಾರ ಮಾಡಲಾಗಿದೆ. ನಿನ್ನೆ ಗಣಪನಿಗೆ ಸಾವಿರ ಕೆಜಿ ಕಡಲೆಕಾಯಿಯಿಂದ ಅಭಿಷೇಕ ಮಾಡಲಾಗಿತ್ತು. ಇಂದು ದೊಡ್ಡಬಸವನಿಗೆ 100 ಸೇರು ಕಡಲೆಕಾಯಿ ಅಭಿಷೇಕ ಮಾಡಲಾಗಿದೆ.

ಇಂದಿನಿಂದ 3 ದಿನಗಳ ಕಾಲ ಪರಿಷೆ ನಡೆಯಲಿದೆ. ಪರಿಷೆಗೆ ಬನ್ನಿ-ಕೈಚೀಲ ತನ್ನಿ’ ಎಂಬ ಆಹ್ವಾನದೊಂದಿಗೆ ಈ ಬಾರಿ ಪರಿಸರ ಸ್ನೇಹಿ ಪರಿಷೆ ನಡೆಸಲಾಗುತ್ತಿದೆ. 65 ವರ್ಷ ಮೇಲ್ಪಟ್ಟವರಿಗೆ ದೇವಸ್ಥಾನದಲ್ಲಿ ವಿಶೇಷ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಕಾರ್ತಿಕ ಕಡೆ ಸೋಮವಾದಂದೇ ಕಡಲೆಕಾಯಿ ಪರಿಷೆಗೆ ಚಾಲನೆ ಇದ್ರೂ, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ನಿನ್ನೆ ದೊಡ್ಡ ಗಣಪತಿಗೆ ವಿಶೇಷ ಪೂಜೆ ಮಾಡಿಸಿದರು. ಚಳಿಗಾಲ ಅಧಿವೇಶನಕ್ಕೆ ಹೋಗುವ ಕಾರಣ ನಿನ್ನೆಯೇ ಪರಿಷೆ ನಡೆಯುವ ಕೆಲವೆಡೆ ಪರಿಶೀಲನೆ ನಡೆಸಿದರು.

ಈ ಬಾರಿಯ ಕಡಲೆಕಾಯಿ ಪರಿಷೆಯನ್ನು ಪ್ಲಾಸ್ಟಿಕ್ ಮುಕ್ತವಾಗಿ ಮಾಡಲು ಕರೆ ಕೊಡಲಾಗಿದ್ದು ಪರಿಷೆಗೆ ಬನ್ನಿ , ಬಟ್ಟೆ ಬ್ಯಾಗ್ ತನ್ನಿ ಎಂದು ಕರೆ ಕೊಟ್ಟಿದ್ದಾರೆ. ಇಂದು ಸಂಜೆ 6ಕ್ಕೆ ಕೆಂಪಾಬುಧಿ ಕೆರೆಯಲ್ಲಿ ತೆಪ್ಪೋತ್ಸವ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಕನಕಪುರ, ದೊಡ್ಡಬಳ್ಳಾಪುರ, ರಾಮನಗರ, ಮಾಗಡಿ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಮೈಸೂರು, ಭಾಗಗಳಿಂದ ವ್ಯಾಪಾರಸ್ಥರು ಬಂದಿದ್ದಾರೆ. ಎಪಿಎಸ್ ಕಾಲೇಜು ಆಟದ ಮೈದಾನ, ಎನ್ಆರ್ ಕಾಲೋನಿ, ಹಯವಧನರಾವ್ ರಸ್ತೆಯಲ್ಲಿರುವ ಕೊಹಿನೂರು ಆಟದ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಜನ ಬರುವ ಹಿನ್ನೆಲೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬಸವನಗುಡಿ ವ್ಯಾಪ್ತಿಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಮತ್ತು ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗಿದೆ.

ಈ ಬಾರಿ ಒಟ್ಟು ನಾಲ್ಕೈ ದು ಕಡಲೆಕಾಯಿ ತಳಿಗಳು ಪರಿಷೆಯಲ್ಲಿ ವ್ಯಾಪಾರವಾಗ್ತಿದೆ. ನಾಟಿ, ಫಾರಂ, ಬೋಂಡಾ ಹಾಗೂ ಬಾದಾಮಿ ಎಂಬಿತ್ಯಾದಿ ಕಡಲೆಕಾಯಿಗಳು ಪರಿಷೆಯಲ್ಲಿ ಮಾರಾಟ ಆಗ್ತಿದೆ. ಕುಟುಂಬ ಸಮೇತ ದೊಡ್ಡಗಣಪನ ದರ್ಶನ ಪಡೆದು ಕಡಲೆಕಾಯಿ ಸವಿಯುವ ದೃಶ್ಯಗಳು ಬೀದಿ ತುಂಬಾ ಕಾಣಸಿಗುತ್ತಿತ್ತು.



















