- Kannada News Photo gallery Bengaluru Traffic Police's special operation on wheeling: 398 cases registered, 324 offenders arrested in a single month
ವ್ಹೀಲಿಂಗ್ ವಿರುದ್ಧ ಸಮರ ಸಾರಿದ ಬೆಂಗಳೂರು ಟ್ರಾಫಿಕ್ ಪೊಲೀಸರು: ಒಂದೇ ತಿಂಗಳಲ್ಲಿ 398 ಕೇಸ್, 324 ಪುಂಡರ ಬಂಧನ
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವ್ಹೀಲಿಂಗ್ ತಡೆಗಟ್ಟುವ ನಿಟ್ಟಿನಲ್ಲಿ ಇದೀಗ ಬೆಂಗಳೂರು ಸಂಚಾರ ಪೊಲೀಸರು ಕಠಿಣ ಕ್ರಮ ಹಾಗೂ ಕಾರ್ಯಾಚರಣೆ ಆರಂಭಿಸಿದ್ದಾರೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ಬೆಂಗಳೂರು ನಗರದಾದ್ಯಂತ 300ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಕೆಲವು ಮಂದಿ ಪುಂಡರು ಲಾಂಗ್ ಹಿಡಿದುಕೊಂಡು ವ್ಹೀಲಿಂಗ್ ಮಾಡಿದ ವಿಡಿಯೋ ವೈರಲ್ ಆಗಿತ್ತು. ಅದರ ಬೆನ್ನಲ್ಲೇ, ವ್ಹೀಲಿಂಗ್ ತಡೆಗೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಗೃಹ ಸಚಿವ ಡಾ. ಜಿ ಪರಮೇಶ್ವರ ಸೂಚನೆ ನೀಡಿದ್ದರು.
Updated on: Apr 01, 2025 | 12:36 PM

ಗೃಹ ಸಚಿವರ ಸೂಚನೆ ಬೆನ್ನಲ್ಲೇ ಬೆಂಗಳೂರು ಸಂಚಾರ ಪೊಲೀಸರು ಕಠಿಣ ಕ್ರಮ ಆರಂಭಿಸಿದ್ದಾರೆ. ಬೆಂಗಳೂರು ನಗರದಾದ್ಯಂತ ಚುರುಕಿನ ಕಾರ್ಯಾಚರಣೆ ನಡೆಸಲಾಗುತ್ತಿದೆ. ಒಂದೇ ತಿಂಗಳಲ್ಲಿ 398 ಪ್ರಕರಣಗಳು ದಾಖಲಾಗಿವೆ. ಕಾರ್ಯಾಚರಣೆ ಬಗ್ಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಒಟ್ಟಾರೆಯಾಗಿ 398 ಪ್ರಕರಣ ದಾಖಲಾಗಿದ್ದು, 324 ಮಂದಿ ಪುಂಡರನ್ನು ಬಂಧಿಸಲಾಗಿದೆ. 397 ಬೈಕ್ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಅಲ್ಲದೆ, ವ್ಹೀಲಿಂಗ್ ವಿರುದ್ಧದ ಕಾರ್ಯಾಚರಣೆ ಮುಂದುವರಿಸಿದ್ದಾರೆ.

40 ಮಂದಿ ಪುಂಡರ ಚಾಲನಾ ಪರವಾನಗಿ (ಡಿಎಲ್) ತಾತ್ಕಾಲಿಕ ರದ್ದುಗೊಳಿಸಲಾಗಿದೆ. 197 ಆರ್ಸಿ ರದ್ದತಿಗೆ ಪತ್ರ ಬರೆಯಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. ಅಪ್ರಾಪ್ತರ ಕೈಗೆ ಬೈಕ್ ಕೊಟ್ಟ 62 ಮಂದಿ ಪೋಷಕರ ವಿರುದ್ಧ ಕೇಸ್ ದಾಖಲಿಸಲಾಗಿದೆ. 82 ಮಂದಿ ಅಪ್ರಾಪ್ತರ ವಿರುದ್ಧವೂ ಕೇಸ್ ದಾಖಲಿಸಲಾಗಿದೆ. ಬಾಲ ನ್ಯಾಯ ಕಾಯ್ದೆ (ಜುವೈನಲ್ ಆ್ಯಕ್ಟ್) ಅಡಿ 32 ಪ್ರಕರಣ ದಾಖಲಿಸಲಾಗಿದೆ.

ಅಪ್ರಾಪ್ತರಿಗೆ ವಾಹನ ಚಲಾಯಿಸಲು ಅವಕಾಶ ನೀಡುವ ಪೋಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಬೆಂಗಳೂರು ಮಾತ್ರವಲ್ಲದೆ, ರಾಜ್ಯಾದ್ಯಂತ ಜಾರಿಯಲ್ಲಿದೆ. ಇತ್ತೀಚೆಗಷ್ಟೇ ದಾವಣಗೆರೆಯಲ್ಲಿ ಪೋಷಕರಿಗೆ ದಂಡ ವಿಧಿಸಿದ ಮೂರ್ನಾಲ್ಕು ಪ್ರಕರಣಗಳು ವರದಿಯಾಗಿದ್ದವು.

ಯುವಕರು ವ್ಹೀಲಿಂಗ್ ಮಾಡಿ ಪುಂಡಾಟ ಮೆರೆಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಬೆಂಗಳೂರು ನಗರದಾದ್ಯಂತ ಮೇಲ್ಸೇತುವೆಗಳಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 6 ವರೆಗೆ ಸಂಚಾರ ನಿಷೇಧಿಸಿ ಟ್ರಾಫಿಕ್ ಪೊಲೀಸರು ಇತ್ತೀಚೆಗಷ್ಟೇ ಆದೇಶ ಹೊರಡಿಸಿದ್ದರು.



