Updated on:Oct 03, 2022 | 2:26 PM
ಗುವಾಹಾಟಿಯಲ್ಲಿ ನಡೆದ ಭಾರತ-ಸೌತ್ ಆಫ್ರಿಕಾ ನಡುವಣ 2ನೇ ಟಿ20 ಪಂದ್ಯದ ವೇಳೆ ಮೈದಾನದಲ್ಲಿ ಹಾವು ಕಾಣಿಸಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಪಂದ್ಯದ 7ನೇ ಓವರ್ ವೇಳೆ ಹಾವೊಂದು ಮೈದಾನದಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿತು.
ಹಾವಿನ ಎಂಟ್ರಿಯಿಂದಾಗಿ ಕೆಲ ಹೊತ್ತು ಪಂದ್ಯ ಕೂಡ ಸ್ಥಗಿತವಾಯಿತು. ಅಚ್ಚರಿ ಎಂದರೆ ಕ್ರಿಕೆಟ್ ಪಂದ್ಯದ ವೇಳೆ ಹಾವು ಮಾತ್ರವಲ್ಲ, ಈ ಹಿಂದೆ ಕೋತಿ, ನಾಯಿ, ನರಿ, ಆನೆ ಕೂಡ ಕಾಣಿಸಿಕೊಂಡಿದೆ ಎಂದರೆ ನಂಬಲೇಬೇಕು.
ಕ್ರಿಕೆಟ್ ಪಂದ್ಯದ ವೇಳೆ ನಾಯಿಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಐರ್ಲೆಂಡ್ ಮಹಿಳಾ ಟಿ20 ಕಪ್ ಪಂದ್ಯದ ವೇಳೆ ಮೈದಾನದಲ್ಲಿ ಕಾಣಿಸಿಕೊಂಡ ನಾಯಿಯು ಚೆಂಡಿನೊಂದಿಗೆ ಓಡಿಹೋಗಿತ್ತು. ಬಾಯಿಯಿಂದ ಚೆಂಡನ್ನು ಕಚ್ಚಿಕೊಂಡ ನಾಯಿಯ ಓಡುವ ಪ್ರಯತ್ನ ಮಾಡಿತು, ಅಷ್ಟರಲ್ಲಿ ಪಂದ್ಯದ ಆಯೋಜಕರು ಮಧ್ಯ ಪ್ರವೇಶಿ ನಾಯಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಕ್ರಿಕೆಟ್ ಪಂದ್ಯದ ವೇಳೆ ನರಿ ಕೂಡ ಕಾಣಿಸಿಕೊಂಡ ನಿದರ್ಶನವಿದೆ. ಅದು 1982 ರ, ಇಂಗ್ಲೆಂಡ್ನ ಎಡ್ಜ್ಬಾಸ್ಟನ್ ಮೈದಾನದಲ್ಲಿ ನಡೆದ ಕೌಂಟಿ ಪಂದ್ಯದಲ್ಲಿ ವಾರ್ವಿಕ್‌ಷೈರ್ ಮತ್ತು ಕೆಂಟ್ ತಂಡಗಳು ಮುಖಾಮುಖಿಯಾಗಿತ್ತು. ಇದೇ ವೇಳೆ ಮೈದಾನದಲ್ಲಿ ನರಿಯೊಂದು ಕಾಣಿಸಿಕೊಂಡಿತ್ತು. ಇದನ್ನು ನೋಡಿ ಆಟಗಾರರು ಅಚ್ಚರಿಗೊಂಡಿದ್ದರು. ಅಲ್ಲದೆ ಅಂದು ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ಡೆರೆಕ್ ಅಂಡರ್‌ವುಡ್‌ನ ನರಿಯನ್ನು ಮೈದಾನದಿಂದ ಓಡಿಸುವಲ್ಲಿ ಯಶಸ್ವಿಯಾಗಿದ್ದರು.
ಇನ್ನು ಕ್ರಿಕೆಟ್ ಮೈದಾನದಲ್ಲಿ ಕೋತಿಗಳು ಕೂಡ ಆಗಾಗ್ಗೆ ಕಾಣಿಸಿಕೊಳ್ಳುತ್ತವೆ. 2014 ರಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಗಾಲೆಯಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಕೋತಿಯೊಂದು ಮೈದಾನಕ್ಕೆ ನುಗ್ಗಿತ್ತು. ಈ ಸುದ್ದಿ ಅಂದು ಭಾರೀ ವೈರಲ್ ಕೂಡ ಆಗಿತ್ತು.
2014 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ದೇಶೀಯ ಪಂದ್ಯದ ವೇಳೆ ಎರಡು ಹಂದಿಗಳು ಮೈದಾನಕ್ಕೆ ನುಗ್ಗಿ ಎಲ್ಲರ ಗಮನ ಸೆಳೆದಿತ್ತು. ಈ ವೇಳೆ ಎಚ್ಚೆತ್ತ ಪಂದ್ಯದ ಆಯೋಜಕರು ಹಂದಿ ಮರಿಗಳನ್ನು ವಶಕ್ಕೆ ಪಡೆದಿದ್ದರು.
1948 ರಲ್ಲಿ ಡೊನಾಲ್ಡ್ ಬ್ರಾಡ್‌ಮನ್‌ನ ಕೊನೆಯ ಪಂದ್ಯದ ವೇಳೆ ಬಾತುಕೋಳಿಗಳು ಮೈದಾನದಲ್ಲಿ ಕಾಣಿಸಿಕೊಂಡಿದ್ದವು. ಅಚ್ಚರಿ ಎಂದರೆ ಈ ಪಂದ್ಯದಲ್ಲಿ ಬ್ರಾಡ್ಮನ್ ಡಕ್ ಔಟ್ ಆಗಿದ್ದರು. ಇದಲ್ಲದೆ ಇನ್ನೂ ಅನೇಕ ಬಾರಿ ಬಾತುಕೋಳಿಗಳು ಮೈದಾನಕ್ಕೆ ಪ್ರವೇಶಿಸಿದ ನಿದರ್ಶನವಿದೆ.
ಇನ್ನು ಐಪಿಎಲ್ ಪಂದ್ಯಗಳ ವೇಳೆಯೂ ಹಲವು ಬಾರಿ ನಾಯಿಗಳು ಮೈದಾನಕ್ಕೆ ಪ್ರವೇಶಿಸಿದ್ದವು. ಈ ವೇಳೆ ಮೈದಾನದ ಸಿಬ್ಬಂದಿಗಳು ನಾಯಿಯನ್ನು ವಶಕ್ಕೆ ಪಡೆದು ಪಂದ್ಯಗಳನ್ನು ಮುಂದುವರೆಸಿದ್ದರು.
ಆಸ್ಟ್ರೇಲಿಯಾದಲ್ಲಿ ನಡೆಯುವ ಪಂದ್ಯಗಳ ವೇಳೆ ಪಾರಿವಾಳ ಹಾಗೂ ಇತರೆ ಪಕ್ಷಿಗಳು ಮೈದಾನದಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ.
ಅಚ್ಚರಿ ಎಂದರೆ ಕ್ರಿಕೆಟ್ ಪಂದ್ಯದ ವೇಳೆ ಆನೆ ಕೂಡ ಕಾಣಿಸಿಕೊಂಡಿದೆ ಎಂದರೆ ನಂಬಲೇಬೇಕು. ಅಂದರೆ 1971ರಲ್ಲಿ ಇಂಗ್ಲೆಂಡ್-ಭಾರತ ನಡುವಣ ಓವಲ್ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಮೈದಾನದಲ್ಲಿ ಆನೆ ಮರಿಯೊಂದು ಕಾಣಿಸಿಕೊಂಡಿತ್ತು. ಈ ಪಂದ್ಯದ ವೇಳೆ ಭಾರತೀಯ ಅಭಿಮಾನಿಗಳು ಗಣೇಶ ಚತುರ್ಥಿಯನ್ನು ಆಚರಿಸಿದ್ದರು. ಈ ವೇಳೆ ಕರೆತರಲಾಗಿದ್ದ ಮರಿ ಆನೆ ಮೈದಾನಕ್ಕೆ ನುಗ್ಗುವ ಮೂಲಕ ಎಲ್ಲರಿಗೂ ಮನರಂಜನೆ ನೀಡಿತು.
Published On - 2:25 pm, Mon, 3 October 22