
2026 ರ ಟಿ20 ವಿಶ್ವಕಪ್‌ನಲ್ಲಿ ಕಳಪೆ ಫಾರ್ಮ್‌ನಿಂದ ನಲುಗಿ ಹೋಗಿದ್ದ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಕೊನೆಗೂ ತಮ್ಮ ಹಳೆಯ ಲಯಕ್ಕೆ ಮರಳಿದ್ದಾರೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಸೂಪರ್ 8 ಪಂದ್ಯದಲ್ಲಿ ಅಭಿಷೇಕ್ ಅರ್ಧಶತಕ ಬಾರಿಸಿದರು.

ಜಿಂಬಾಬ್ವೆ ವಿರುದ್ಧದ ಈ ಪಂದ್ಯದಲ್ಲಿ 26 ಎಸೆತಗಳಲ್ಲಿ 50 ರನ್ ಪೂರೈಸಿದ ಅಭಿಷೇಕ್ ಶರ್ಮಾ ಅವರ ಈ ಅರ್ಧಶತಕದಲ್ಲಿ 3ಬೌಂಡರಿ ಹಾಗೂ 4 ಸಿಕ್ಸರ್ಗಳು ಸೇರಿವೆ. ವಾಸ್ತವವಾಗಿ ಟಿ20 ವಿಶ್ವಕಪ್‌ನಲ್ಲಿ ಅಭಿಷೇಕ್ ಶರ್ಮಾರ ಮೊದಲ ಅರ್ಧಶತಕ ಇದಾಗಿದೆ.

ಚೊಚ್ಚಲ ಟಿ20 ವಿಶ್ವಕಪ್ ಆಡುತ್ತಿರುವ ಅಭಿಷೇಕ್ ಶರ್ಮಾ, ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಭರ್ಜರಿ ಫಾರ್ಮ್ನಲ್ಲಿದ್ದರು. ಅವರ ಬ್ಯಾಟ್ನಿಂದ ನಿರಂತರವಾಗಿ ರನ್ ಮಳೆ ಹರಿಯುತಿತ್ತು. ಆದರೆ ಟಿ20 ವಿಶ್ವಕಪ್ ಆರಂಭವಾದ ಬಳಿಕ ಅಭಿಷೇಕ್ ಅವರ ಬ್ಯಾಟ್ ಮೌನಕ್ಕೆ ಶರಣಾಯಿತು. ಇದರ ಪರಿಣಾಮವಾಗಿ ಲೀಗ್ ಹಂತದಲ್ಲಿ ಅಭಿಷೇಕ್ ರನ್ ಖಾತೆ ಕೂಡ ತೆರೆಯಲಿಲ್ಲ.

2026 ರ ಟಿ20 ವಿಶ್ವಕಪ್‌ನ ಮೊದಲ ಮೂರು ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್ ಶರ್ಮಾ ಎಂಟು ಎಸೆತಗಳನ್ನು ಎದುರಿಸಿ ಒಂದೇ ಒಂದು ರನ್ ಗಳಿಸಲು ವಿಫಲರಾದರು. ಯುಎಸ್ಎ ವಿರುದ್ಧದ ಮೊದಲ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಔಟಾಗಿದ್ದ ಅಭಿಷೇಕ್, ಪಾಕಿಸ್ತಾನ ವಿರುದ್ಧದ ಎರಡನೇ ಪಂದ್ಯದಲ್ಲಿ, ನಾಲ್ಕು ಎಸೆತಗಳನ್ನು ಎದುರಿಸಿ ರನ್ ಗಳಿಸಲು ವಿಫಲರಾಗಿದ್ದರು. ನೆದರ್ಲ್ಯಾಂಡ್ಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಕೇವಲ ಮೂರು ಎಸೆತಗಳನ್ನು ಎದುರಿಸಿ ನಿರಾಶೆ ಮೂಡಿಸಿದ್ದರು.

ಆದಾಗ್ಯೂ ಸೂಪರ್ 8 ಸುತ್ತಿನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಗೂ ರನ್ ಖಾತೆ ತರೆದಿದ್ದ ಅಭಿಷೇಕ್ ಶರ್ಮಾ 12 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿ 15 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರು. ಇದೀಗ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿರುವ ಅಭಿಷೇಕ್ ಫಾರ್ಮ್ ಕಂಡುಕೊಂಡಿರುವುದು ಮ್ಯಾನೇಜ್‌ಮೆಂಟ್‌ಗೆ ಸಮಾಧಾನ ತಂದಿದೆ.