Updated on: Apr 29, 2023 | 9:22 PM
ಐಪಿಎಲ್ನಲ್ಲಿ (IPL) ಒಂದೇ ಓವರ್ನಲ್ಲಿ ಮೂಡಿಬಂದ ಅತ್ಯಧಿಕ ರನ್ ಎಂದರೆ 37. ಈ ದಾಖಲೆ ಬರೆದ ಮೊದಲ ಬ್ಯಾಟ್ಸ್ಮನ್ ಕ್ರಿಸ್ ಗೇಲ್ (Chris Gayle). 2011 ರಲ್ಲಿ ಆರ್ಸಿಬಿ ಪರ ಆಡಿದ್ದ ಗೇಲ್ ಕೊಚ್ಚಿ ಟಸ್ಕರ್ಸ್ ತಂಡದ ವೇಗಿ ಪ್ರಶಾಂತ್ ಪರಮೇಶ್ವರನ್ ಓವರ್ನಲ್ಲಿ ನೋಬಾಲ್ ಸೇರಿದಂತೆ 37 ರನ್ ಬಾರಿಸಿದ್ದರು. ಇದಾದ ಬಳಿಕ 2021 ರಲ್ಲಿ ಆರ್ಸಿಬಿ (RCB) ವಿರುದ್ದದ ಪಂದ್ಯದಲ್ಲಿ ಸಿಎಸ್ಕೆ (CSK) ಆಟಗಾರ ರವೀಂದ್ರ ಜಡೇಜಾ (Ravindra Jadeja) ಹರ್ಷಲ್ ಪಟೇಲ್ ಅವರ ಒಂದೇ ಓವರ್ನಲ್ಲಿ 37 ರನ್ ಸಿಡಿಸಿ ಈ ದಾಖಲೆಯನ್ನು ಸರಿಗಟ್ಟಿದ್ದರು.
ಇದು ಐಪಿಎಲ್ನ ಓವರ್ ಒಂದರ ಗರಿಷ್ಠ ಸ್ಕೋರ್. ಇದಾಗ್ಯೂ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಓವರ್ನಲ್ಲಿ 55 ರನ್ ಬಾರಿಸಿದ ದಾಖಲೆ ಕೂಡ ಇದೆ. ಈ ದಾಖಲೆಯು ಪ್ರಸ್ತುತ ಕ್ರಿಕೆಟ್ ಆಡುತ್ತಿರುವ ಆಟಗಾರನ ಹೆಸರಿನಲ್ಲಿರುವುದು ವಿಶೇಷ.
ಹೌದು, ನೀವು ಅಲೆಕ್ಸ್ ಹೇಲ್ಸ್ (Alex Hales) ಹೆಸರು ಕೇಳಿರಬಹುದು. ಇಂಗ್ಲೆಂಡ್ ತಂಡದ ಸ್ಪೋಟಕ ಆರಂಭಿಕ ಆಟಗಾರ. ಈ ಹಿಂದೆ ಐಪಿಎಲ್ನಲ್ಲೂ ಕಾಣಿಸಿಕೊಂಡಿದ್ದರು. ಇದೇ ಅಲೆಕ್ಸ್ ಹೇಲ್ಸ್ ಹೆಸರಿನಲ್ಲಿದೆ ಓವರ್ವೊಂದರಲ್ಲಿ 55 ರನ್ ಬಾರಿಸಿದ ದಾಖಲೆ. ಅದು ಕೂಡ ತಮ್ಮ 16ನೇ ವಯಸ್ಸಿನಲ್ಲಿ ಎಂಬುದು ವಿಶೇಷ.
2005 ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಐಡಲ್ ಟಿ20 ಟೂರ್ನಿಯಲ್ಲಿ ಅಲೆಕ್ಸ್ ಹೇಲ್ಸ್ ಈ ದಾಖಲೆ ಬರೆದಿದ್ದರು. ಲಾರ್ಡ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಕಣಕ್ಕಿಳಿದಿದ್ದ 16 ವರ್ಷದ ಅಲೆಕ್ಸ್ ಹೇಲ್ಸ್ ಒಂದೇ ಓವರ್ನಲ್ಲಿ 8 ಸಿಕ್ಸ್ ಸಿಡಿಸಿದ್ದರು. ಜೊತೆಗೆ 1 ಫೋರ್ನೊಂದಿಗೆ ಅರ್ಧಶತಕ ಪೂರೈಸಿದ್ದರು.
ಅಂದರೆ ಈ ಓವರ್ನಲ್ಲಿ 3 ನೋ ಬಾಲ್ ಎಸೆಯಲಾಗಿತ್ತು. ಇದರ ಲಾಭ ಪಡೆದ ಅಲೆಕ್ಸ್ ಹೇಲ್ಸ್ 8 ಸಿಕ್ಸ್ ಹಾಗೂ 1 ಫೋರ್ ಬಾರಿಸುವ ಮೂಲಕ ಒಟ್ಟು 52 ರನ್ ಬಾರಿಸಿದ್ದರು. ನೋ ಬಾಲ್ ಸೇರಿದಂತೆ ಆ ಓವರ್ನಲ್ಲಿ ಒಟ್ಟು 55 ರನ್ಗಳು ಮೂಡಿಬಂದಿತ್ತು. ಇದಾಗ್ಯೂ ಇದು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಗಿರದ ಕಾರಣ ಈ ದಾಖಲೆಯನ್ನು ಐಸಿಸಿ ರೆಕಾರ್ಡ್ ಬುಕ್ನಲ್ಲಿ ಪರಿಗಣಿಸಲಾಗಿಲ್ಲ.
ಅಂದು 16 ವರ್ಷದ ಅಲೆಕ್ಸ್ ಹೇಲ್ಸ್ ತಮ್ಮ ಸ್ಪೋಟಕ ಬ್ಯಾಟಿಂಗ್ ಅನ್ನು ವಿಶ್ವದ ಮುಂದೆ ತೆರೆದಿಟ್ಟಿದ್ದರು. ಆ ಬಳಿಕ ಇಂಗ್ಲೆಂಡ್ ತಂಡದಲ್ಲೂ ಕಾಣಿಸಿಕೊಂಡಿದ್ದ ಹೇಲ್ಸ್, ಟಿ20 ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಪರ ಮೊದಲ ಶತಕ ಬಾರಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನೂ ಕೂಡ ಬರೆದರು.
ಇನ್ನು ಅಲೆಕ್ಸ್ ಹೇಲ್ಸ್ ಈ ಹಿಂದೆ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲೂ ಕಾಣಿಸಿಕೊಂಡಿದ್ದರು. ಆದರೆ ಆಡಿದ್ದು ಕೇವಲ 6 ಪಂದ್ಯಗಳನ್ನು ಮಾತ್ರ.
2018 ರಲ್ಲಿ ಎಸ್ಆರ್ಹೆಚ್ ಪರ ಪಾದರ್ಪಣೆ ಮಾಡಿದ್ದ ಹೇಲ್ಸ್ ಐಪಿಎಲ್ನಲ್ಲಿ 6 ಪಂದ್ಯಗಳಿಂದ 148 ರನ್ ಕಲೆಹಾಕಿದ್ದರು. ಈ ವೇಳೆ ಅಲೆಕ್ಸ್ ಹೇಲ್ಸ್ ಬ್ಯಾಟ್ನಿಂದ 13 ಬೌಂಡರಿ ಹಾಗೂ 6 ಸಿಕ್ಸ್ಗಳು ಮೂಡಿಬಂದಿರುವುದು ವಿಶೇಷ.