Ashwin: ಭಾರತದಲ್ಲಿ ಅಶ್ವಿನ್ ಐತಿಹಾಸಿಕ ಸಾಧನೆ
India vs England 4th Test: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಪಂದ್ಯದಲ್ಲಿ 3 ವಿಕೆಟ್ ಕಬಳಿಸುವುದರೊಂದಿಗೆ ಅಶ್ವಿನ್ ತವರಿನಲ್ಲಿ 350 ಟೆಸ್ಟ್ ವಿಕೆಟ್ ಕಬಳಿಸಿದ 2ನೇ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಅನಿಲ್ ಕುಂಬ್ಳೆ ಮಾತ್ರ ಈ ಸಾಧನೆ ಮಾಡಿದ್ದರು.
Updated on: Feb 25, 2024 | 1:23 PM

ರಾಂಚಿಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin) ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 1 ವಿಕೆಟ್ ಪಡೆದಿದ್ದ ಅಶ್ವಿನ್, ದ್ವಿತೀಯ ಇನಿಂಗ್ಸ್ನ ಆರಂಭದಲ್ಲೇ 3 ವಿಕೆಟ್ ಕಬಳಿಸಿದ್ದಾರೆ. ಈ ಮೂರು ವಿಕೆಟ್ಗಳೊಂದಿಗೆ ಇದೀಗ ವಿಶೇಷ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಂದರೆ ಭಾರತದಲ್ಲಿ ಆಡಲಾದ ಟೆಸ್ಟ್ ಪಂದ್ಯಗಳಲ್ಲಿ ಅತೀ ಹೆಚ್ಚು ವಿಕೆಟ್ಗಳನ್ನು ಕಬಳಿಸಿದ ದಾಖಲೆ ಇದೀಗ ರವಿಚಂದ್ರನ್ ಅಶ್ವಿನ್ ಪಾಲಾಗಿದೆ. ಇದಕ್ಕೂ ಮುನ್ನ ಈ ವಿಶೇಷ ದಾಖಲೆ ಟೀಮ್ ಇಂಡಿಯಾ ಲೆಜೆಂಡ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರ ಹೆಸರಿನಲ್ಲಿತ್ತು.

ಭಾರತದಲ್ಲಿ 63 ಟೆಸ್ಟ್ ಪಂದ್ಯಗಳನ್ನಾಡಿದ್ದ ಅನಿಲ್ ಕುಂಬ್ಳೆ ಬರೋಬ್ಬರಿ 350 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಮೂಲಕ ತವರಿನ ಪಿಚ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ಕುಂಬ್ಳೆ ಬರೆದಿದ್ದರು.

ಇದೀಗ ರಾಂಚಿಯಲ್ಲಿ 4 ವಿಕೆಟ್ ಕಬಳಿಸುವುದರೊಂದಿಗೆ ಭಾರತದಲ್ಲಿ ಅತ್ಯಧಿಕ ಟೆಸ್ಟ್ ವಿಕೆಟ್ ಪಡೆದ ದಾಖಲೆ ಅಶ್ವಿನ್ ಪಾಲಾಗಿದೆ. ತವರಿನಲ್ಲಿ ಒಟ್ಟು 59 ಟೆಸ್ಟ್ ಪಂದ್ಯಗಳನ್ನಾಡಿರುವ ರವಿಚಂದ್ರನ್ ಅಶ್ವಿನ್ ಇದುವರೆಗೆ 352* ವಿಕೆಟ್ಗಳನ್ನು ಕಬಳಿಸಿದ್ದಾರೆ.

ಈ ಮೂಲಕ ಅನಿಲ್ ಕುಂಬ್ಳೆ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಮುರಿದು ರವಿಚಂದ್ರನ್ ಅಶ್ವಿನ್ ಭಾರತದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದರ ಜೊತೆಗೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ 100 ಕ್ಕೂ ಅಧಿಕ ವಿಕೆಟ್ ಪಡೆದ ಭಾರತದ ಏಕೈಕ ಬೌಲರ್ ಎಂಬ ಹಿರಿಮೆಗೂ ಅಶ್ವಿನ್ ಪಾತ್ರರಾಗಿದ್ದಾರೆ.

ಇನ್ನು ತವರು ಮೈದಾನದಲ್ಲಿ ಅತ್ಯಧಿಕ ವಿಕೆಟ್ ಪಡೆದ ವಿಶ್ವ ದಾಖಲೆ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. ಶ್ರೀಲಂಕಾದಲ್ಲಿ ಆಡಲಾದ ಟೆಸ್ಟ್ ಪಂದ್ಯದಲ್ಲಿ ಮುರಳೀಧರನ್ ಒಟ್ಟು 493 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇನ್ನು ದ್ವಿತೀಯ ಮತ್ತು ತೃತೀಯ ಸ್ಥಾನಗಳಲ್ಲಿ ಇಂಗ್ಲೆಂಡ್ನ ಜೇಮ್ಸ್ ಆಂಡರ್ಸನ್ (434) ಹಾಗೂ ಸ್ಟುವರ್ಟ್ ಬ್ರಾಡ್ (398) ಇದ್ದಾರೆ. ಇದೀಗ 350 ಕ್ಕಿಂತ ಹೆಚ್ಚಿನ ವಿಕೆಟ್ ಪಡೆಯುವ ಮೂಲಕ ಈ ಸಾಧಕರ ಪಟ್ಟಿಗೆ ಅಶ್ವಿನ್ ಕೂಡ ಸೇರ್ಪಡೆಯಾಗಿದ್ದಾರೆ.
