ರಾಂಚಿಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೇಲ್ (Dhruv Jurel) ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 353 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ನಿರೀಕ್ಷಿತ ಆರಂಭ ಪಡೆದಿರಲಿಲ್ಲ.
ಆರಂಭಿಕ ಆಟಗಾರ ರೋಹಿತ್ ಶರ್ಮಾ (2) ಬೇಗನೆ ಔಟಾದರೆ, ಆ ಬಳಿಕ ಬಂದ ಶುಭ್ಮನ್ ಗಿಲ್ 38 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ರಜತ್ ಪಾಟಿದಾರ್ (12) ಹಾಗೂ ಸರ್ಫರಾಝ್ ಖಾನ್ (14) ಬಂದ ವೇಗದಲ್ಲೇ ಹಿಂತಿರುಗಿದ್ದರು. ಇದಾಗ್ಯೂ ಯಶಸ್ವಿ ಜೈಸ್ವಾಲ್ 73 ರನ್ಗಳ ಕೊಡುಗೆ ನೀಡಿದ್ದರು.
ಕೇವಲ 171 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಮಯದಲ್ಲಿ ಕಣಕ್ಕಿಳಿದ ಧ್ರುವ್ ಜುರೇಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಎಚ್ಚರಿಕೆಯ ಬ್ಯಾಟಿಂಗ್ನೊಂದಿಗೆ ರನ್ ಕಲೆಹಾಕುತ್ತಾ ಸಾಗಿದ ಜುರೇಲ್ 2ನೇ ದಿನದಾಟದಲ್ಲಿ ಟೀಮ್ ಇಂಡಿಯಾ ಆಲೌಟ್ ಆಗುವುದನ್ನು ತಡೆದರು.
ಇನ್ನು 3ನೇ ದಿನದಾಟದಲ್ಲಿ ಕುಲ್ದೀಪ್ ಯಾದವ್ (28) ಜೊತೆಗೂಡಿ ಇನಿಂಗ್ಸ್ ಕಟ್ಟಿದ ಧ್ರುವ್ 96 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಾಫ್ ಸೆಂಚುರಿ ಬೆನ್ನಲ್ಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಯುವ ಬ್ಯಾಟರ್ ರನ್ ಗಳಿಕೆಯ ವೇಗವನ್ನು ಹೆಚ್ಚಿಸಿದರು.
ಆದರೆ 90 ರನ್ಗಳಿಸಿದ್ದ ವೇಳೆ ಟಾಮ್ ಹಾರ್ಟ್ಲಿ ಎಸೆತವನ್ನು ಗುರುತಿಸುವಲ್ಲಿ ಎಡವಿದ ಧ್ರುವ್ ಜುರೇಲ್ ಕ್ಲೀನ್ ಬೌಲ್ಡ್ ಆದರು. ಈ ಮೂಲಕ ಕೇವಲ 10 ರನ್ಗಳಿಂದ ಚೊಚ್ಚಲ ಶತಕ ಪೂರೈಸುವ ಅವಕಾಶವನ್ನು ತಪ್ಪಿಸಿಕೊಂಡರು.
ಇನ್ನು ಧ್ರುವ್ ಜುರೇಲ್ (90) ಹಾಗೂ ಯಶಸ್ವಿ ಜೈಸ್ವಾಲ್ (73) ಅವರ ಅರ್ಧಶತಕಗಳ ನೆರವಿನಿಂದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 307 ರನ್ ಕಲೆಹಾಕಿದೆ. ಇದಾಗ್ಯೂ ಪ್ರಥಮ ಇನಿಂಗ್ಸ್ನಲ್ಲಿ ಭಾರತ ತಂಡವು 46 ರನ್ಗಳ ಹಿನ್ನಡೆ ಅನುಭವಿಸಿದೆ.
Published On - 11:55 am, Sun, 25 February 24