ಭಾರತ vs ಪಾಕಿಸ್ತಾನ್ ನಡುವೆ 5 ಬಾರಿ ಫೈನಲ್: 3 ಬಾರಿ ಪಾಕ್ ಚಾಂಪಿಯನ್
India vs Pakistan Final: ಮಲ್ಟಿ ನೇಷನ್ ಟೂರ್ನಿಗಳ ಫೈನಲ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ಆರು ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಮೂರು ಬಾರಿ ಪಾಕಿಸ್ತಾನ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಎರಡು ಬಾರಿ ಟ್ರೋಫಿ ಎತ್ತಿ ಹಿಡಿಯುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ.
Updated on: Sep 28, 2025 | 12:54 PM

Asia Cup 2025 Final: ಏಷ್ಯಾಕಪ್ನ ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಇಂದು (ಸೆ.28) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಬದ್ಧವೈರಿಗಳಾದ ಭಾರತ ಮತ್ತು ಪಾಕಿಸ್ತಾನ್ (India vs Pakistan) ತಂಡಗಳು ಮುಖಾಮುಖಿಯಾಗಲಿದೆ.

ಉಭಯ ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗುತ್ತಿರುವುದು ಇದು 6ನೇ ಬಾರಿ ಎಂಬುದು ವಿಶೇಷ. ಇದಕ್ಕೂ ಮುನ್ನ ಭಾರತ ಮತ್ತು ಪಾಕ್ 5 ಬಾರಿ ಫೈನಲ್ನಲ್ಲಿ ಕಾದಾಡಿದೆ. ಈ ವೇಳೆ ಟೀಮ್ ಇಂಡಿಯಾ ಎರಡು ಬಾರಿ ಗೆದ್ದರೆ, ಪಾಕಿಸ್ತಾನ್ ತಂಡ 3 ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿತ್ತು. ಈ ಹಿಂದಿನ ಭಾರತ-ಪಾಕಿಸ್ತಾನ್ ನಡುವಣ ಫೈನಲ್ ಕದನಗಳ ಸಂಕ್ಷಿಪ್ತ ವಿವರ ಇಲ್ಲಿದೆ...

ಬೆನ್ಸನ್ ಹೆಡ್ಜಸ್ ವಿಶ್ವ ಕ್ರಿಕೆಟ್ ಚಾಂಪಿಯನ್‌ಶಿಪ್ ಫೈನಲ್: 1985 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬೆನ್ಸನ್ ಹೆಡ್ಜಸ್ ವಿಶ್ವ ಕ್ರಿಕೆಟ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 50 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 176 ರನ್ಗಳು. ಈ ಗುರಿಯನ್ನು 47.1 ಓವರ್ಗಳಲ್ಲಿ ಚೇಸ್ ಮಾಡಿದ ತ ಸುನಿಲ್ ಗವಾಸ್ಕರ್ ನೇತೃತ್ವದ ಭಾರತ ತಂಡ 8 ವಿಕೆಟ್ಗಳ ಜಯದೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.

ಆಸ್ಟ್ರಲ್-ಏಷ್ಯಾ ಕಪ್ ಫೈನಲ್: 1986 ರಲ್ಲಿ ಶಾರ್ಜಾದಲ್ಲಿ ನಡೆದ ಆಸ್ಟ್ರಲ್-ಏಷ್ಯಾ ಕಪ್ ಫೈನಲ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ಗಳಲ್ಲಿ ಕಲೆಹಾಕಿದ್ದು 245 ರನ್ಗಳು. ಈ ಗುರಿಯನ್ನು ಪಾಕಿಸ್ತಾನ್ ತಂಡ 50 ಓವರ್ಗಳಲ್ಲಿ ಚೇಸ್ ಮಾಡಿ 1 ವಿಕೆಟ್ನ ರೋಚಕ ಜಯ ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿತ್ತು.

ಆಸ್ಟ್ರಲ್-ಏಷ್ಯಾಕಪ್ ಫೈನಲ್: 1994 ರಲ್ಲಿ ನಡೆದ ಮೂರನೇ ಆಸ್ಟ್ರಲ್ - ಏಷ್ಯಾ ಕಪ್ ಟೂರ್ನಿಯ ಫೈನಲ್ನಲ್ಲಿ ಪಾಕಿಸ್ತಾನ್ ಹಾಗೂ ಭಾರತ ಕಣಕ್ಕಿಳಿದಿದ್ದವು. ಶಾರ್ಜಾದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ 50 ಓವರ್ಗಳಲ್ಲಿ 250 ರನ್ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 211 ರನ್ಗಳಿಗೆ ಆಲೌಟ್ ಆಗಿ 39 ರನ್ಗಳಿಂದ ಸೋಲೊಪ್ಪಿಕೊಂಡಿದ್ದರು.

ಟಿ20 ವಿಶ್ವಕಪ್ ಫೈನಲ್: 2007 ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ನ ಫೈನಲ್ನಲ್ಲಿ ಮುಖಾಮುಖಿಯಾಗಿದದ್ದು ಭಾರತ ಮತ್ತು ಪಾಕಿಸ್ತಾನ್. ಜೋಹಾನ್ಸ್ಬರ್ಗ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 157 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ 152 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ತಂಡವು 5 ರನ್ಗಳ ರೋಚಕ ಗೆಲುವಿನೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ಚಾಂಪಿಯನ್ಸ್ ಟ್ರೋಫಿ ಫೈನಲ್: 2017 ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಿತ್ತು. ಲಂಡನ್ನಲ್ಲಿ ನಡೆದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡ 50 ಓವರ್ಗಳಲ್ಲಿ 338 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಕೇವಲ 158 ರನ್ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಪಾಕಿಸ್ತಾನ್ ತಂಡವು ಮೂರನೇ ಬಾರಿ ಭಾರತದ ವಿರುದ್ಧ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿತ್ತು.

ಇದೀಗ ಉಭಯ ತಂಡಗಳು ಆರನೇ ಬಾರಿ ಫೈನಲ್ನಲ್ಲಿ ಮುಖಾಮುಖಿಯಾಗಿವೆ. ಈ ಬಾರಿ ಗೆಲ್ಲುವ ಫೇವರೇಟ್ ತಂಡವಾಗಿ ಟೀಮ್ ಇಂಡಿಯಾ ಗುರುತಿಸಿಕೊಂಡಿದೆ. ಇದಾಗ್ಯೂ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ್ ತಂಡದಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಈ ಪೈಪೋಟಿಯಲ್ಲಿ ಪಾಕ್ ಪಡೆಯನ್ನು ಬಗ್ಗು ಬಡಿದು ಭಾರತ ತಂಡ ಏಷ್ಯಾಕಪ್ ಎತ್ತಿ ಹಿಡಿಯುವುದನ್ನು ನಿರೀಕ್ಷಿಸಬಹುದು.




