ದಾಖಲೆಯ ಚೇಸಿಂಗ್… ವಿಶ್ವ ದಾಖಲೆ ಬರೆದ ಆಸ್ಟ್ರೇಲಿಯಾ
West Indies vs Australia, 4th T20I: ವೆಸ್ಟ್ ಇಂಡೀಸ್ ವಿರುದ್ಧದ 4ನೇ ಟಿ20 ಪಂದ್ಯದಲ್ಲೂ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್ಗಳಲ್ಲಿ 205 ರನ್ ಕಲೆಹಾಕಿದ್ದರು. ಈ ಗುರಿಯನ್ನು ಆಸ್ಟ್ರೇಲಿಯಾ ತಂಡ 19.2 ಓವರ್ಗಳಲ್ಲಿ ಚೇಸ್ ಮಾಡಿ 3 ವಿಕೆಟ್ಗಳ ಗೆಲುವು ದಾಖಲಿಸಿದೆ.
Updated on: Jul 27, 2025 | 9:23 AM

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಬಾರಿ 200+ ರನ್ಗಳನ್ನು ಚೇಸ್ ಮಾಡಿ ಆಸ್ಟ್ರೇಲಿಯಾ ತಂಡ ಹೊಸ ಇತಿಹಾಸ ನಿರ್ಮಿಸಿದೆ. ಈ ಭರ್ಜರಿ ದಾಖಲೆಯೊಂದಿಗೆ ಆಸೀಸ್ ಪಡೆ ಟೀಮ್ ಇಂಡಿಯಾ ಹಾಗೂ ಸೌತ್ ಆಫ್ರಿಕಾ ತಂಡಗಳ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಸಹ ಮುರಿದಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 215 ರನ್ಗಳನ್ನು ಬೆನ್ನತ್ತಿ ಗೆದ್ದಿದ್ದ ಆಸ್ಟ್ರೇಲಿಯಾ ತಂಡವು ಇದೀಗ ನಾಲ್ಕನೇ ಟಿ20 ಪಂದ್ಯದಲ್ಲಿ 206 ರನ್ಗಳನ್ನು ಚೇಸ್ ಮಾಡಿ ಜಯ ಸಾಧಿಸಿದೆ. ಈ ಗೆಲುವುಗಳೊಂದಿಗೆ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ಬಾರಿ 200+ ಸ್ಕೋರ್ ಬೆನ್ನತ್ತಿ ಗೆದ್ದ ತಂಡವೆಂಬ ಹೆಗ್ಗಳಿಕೆಯುನ್ನು ಆಸ್ಟ್ರೇಲಿಯಾ ತಂಡ ತನ್ನದಾಗಿಸಿಕೊಂಡಿದೆ.

ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳ ಹೆಸರಿನಲ್ಲಿದೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಹಾಗೂ ಸೌತ್ ಆಫ್ರಿಕಾ ತಂಡಗಳು ತಲಾ 5 ಬಾರಿ 200 ಕ್ಕೂ ಅಧಿಕ ರನ್ಗಳ ಗುರಿಯನ್ನು ಬೆನ್ನತ್ತಿ ಜಯಗಳಿಸಿದೆ. ಈ ಮೂಲಕ ಉಭಯ ತಂಡಗಳು ಯಶಸ್ವಿ ರನ್ ಚೇಸರ್ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು.

ಇದೀಗ ಈ ವಿಶ್ವ ದಾಖಲೆಯನ್ನು ಆಸ್ಟ್ರೇಲಿಯಾ ಪಡೆ ಅಳಿಸಿ ಹಾಕಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಮತ್ತು ನಾಲ್ಕನೇ ಟಿ20 ಪಂದ್ಯಗಳಲ್ಲಿ 200+ ಟಾರ್ಗೆಟ್ಗಳನ್ನು ಚೇಸ್ ಮಾಡುವ ಮೂಲಕ ಆಸೀಸ್ ಪಡೆ ದಾಖಲೆಯ ಚೇಸಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಅದು ಕೂಡ 7 ಬಾರಿ 200+ ರನ್ಗಳನ್ನು ಬೆನ್ನತ್ತುವ ಮೂಲಕ ಎಂಬುದು ವಿಶೇಷ.

ಆಸ್ಟ್ರೇಲಿಯಾ ತಂಡವು ನ್ಯೂಝಿಲೆಂಡ್ ವಿರುದ್ಧ ಈ ಹಿಂದೆ 244 ಹಾಗೂ 216 ರನ್ಗಳನ್ನು ಚೇಸ್ ಮಾಡಿದ್ದರು. ಹಾಗೆಯೇ ಭಾರತದ ವಿರುದ್ಧ 223 ಹಾಗೂ 209 ರನ್ಗಳನ್ನು ಬೆನ್ನತ್ತಿ ಗೆದ್ದಿದ್ದರು. ಇನ್ನು ಸೌತ್ ಆಫ್ರಿಕಾ ವಿರುದ್ಧ 205 ರನ್ಗಳ ಗುರಿಯನ್ನು ಚೇಸ್ ಮಾಡಿದ್ದರು. ವೆಸ್ಟ್ ಇಂಡೀಸ್ ವಿರುದ್ಧ 205, 215 ಹಾಗೂ 206 ರನ್ಗಳನ್ನು ಚೇಸ್ ಗೆದ್ದಿದ್ದಾರೆ. ಈ ಮೂಲಕ ಒಟ್ಟು 7 ಬಾರಿ 200 ಪ್ಲಸ್ ಗುರಿಯನ್ನು ಬೆನ್ನತ್ತಿ ಗೆದ್ದು ಆಸ್ಟ್ರೇಲಿಯಾ ಹೊಸ ವಿಶ್ವ ದಾಖಲೆ ನಿರ್ಮಿಸಿದೆ.
