- Kannada News Photo gallery Cricket photos Australia Following Team India's longest winning streak in T20Is
AUS vs SA: ಸೌತ್ ಆಫ್ರಿಕಾ ಕೈಯಲ್ಲಿದೆ ಟೀಮ್ ಇಂಡಿಯಾದ ವಿಶ್ವ ದಾಖಲೆ ಭವಿಷ್ಯ
Australia vs South Africa: ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ನಡುವೆ ಟಿ20 ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಮ್ಯಾಚ್ನಲ್ಲಿ ಆಸ್ಟ್ರೇಲಿಯಾ ತಂಡ ಗೆಲುವು ದಾಖಲಿಸಿದೆ. ಇನ್ನು ಉಭಯ ತಂಡಗಳು 4 ಮ್ಯಾಚ್ಗಳಲ್ಲಿ ಮುಖಾಮುಖಿಯಾಗಲಿದೆ. ಈ ಎಲ್ಲಾ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆದ್ದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.
Updated on:Aug 12, 2025 | 9:33 AM

ಟಿ20 ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯಾ ತಂಡದ ಗೆಲುವಿನ ನಾಗಾಲೋಟ ಮುಂದುವರೆದಿದೆ. ಈ ಗೆಲುವಿನ ನಾಗಾಲೋಟದೊಂದಿಗೆ ಆಸೀಸ್ ಪಡೆ ಇದೀಗ ವಿಶ್ವ ದಾಖಲೆಯತ್ತ ದಾಪುಗಾಲಿಟ್ಟಿದೆ. ಅಂದರೆ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 17 ರನ್ ಗಳ ಭರ್ಜರಿ ಜಯ ಸಾಧಿಸಿರುವ ಆಸ್ಟ್ರೇಲಿಯಾ ತಂಡ ಮುಂದಿನ 4 ಪಂದ್ಯಗಳಲ್ಲೂ ಗೆದ್ದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.

ಸೌತ್ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್ನಲ್ಲಿ ಜಯ ಸಾಧಿಸಿರುವ ಆಸ್ಟ್ರೇಲಿಯಾ ಸತತ 9 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ ಸಾಧನೆ ಮಾಡಿದೆ. ಇನ್ನು ನಾಲ್ಕು ಮ್ಯಾಚ್ ಗಳಲ್ಲೂ ಗೆಲುವು ದಾಖಲಿಸಿದರೆ ಆಸ್ಟ್ರೇಲಿಯಾ ಹೆಸರಿಗೆ ಹೊಸ ವಿಶ್ವ ದಾಖಲೆ ಸೇರ್ಪಡೆಯಾಗಲಿದೆ. ಅದು ಕೂಡ ಟೀಮ್ ಇಂಡಿಯಾ ದಾಖಲೆ ಮುರಿಯುವ ಮೂಲಕ.

ಅಂದರೆ ಐಸಿಸಿ ಪೂರ್ಣ ಸದಸ್ಯ ರಾಷ್ಟ್ರಗಳ ಪೈಕಿ ಟಿ20 ಕ್ರಿಕೆಟ್ ನಲ್ಲಿ ಸತತವಾಗಿ ಅತ್ಯಧಿಕ ಪಂದ್ಯಗಳನ್ನು ಗೆದ್ದ ವಿಶ್ವ ದಾಖಲೆ ಟೀಮ್ ಇಂಡಿಯಾ ಹೆಸರಿನಲ್ಲಿದೆ. ಭಾರತ ತಂಡವು 2021-22 ರ ನಡುವೆ ಸತತ 12 ಮ್ಯಾಚ್ ಗಳಲ್ಲಿ ಗೆಲುವು ದಾಖಲಿಸಿ ಈ ವಿಶೇಷ ವಿಶ್ವ ದಾಖಲೆಯನ್ನು ನಿರ್ಮಿಸಿದೆ.

ಇದೀಗ 9 ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಆಸ್ಟ್ರೇಲಿಯಾ ತಂಡವು ಸೌತ್ ಆಫ್ರಿಕಾ ವಿರುದ್ಧದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರೆ ಹೊಸ ವಿಶ್ವ ದಾಖಲೆ ನಿರ್ಮಾಣವಾಗುವುದು ಖಚಿತ. ಏಕೆಂದರೆ ಆಸ್ಟ್ರೇಲಿಯಾ ಮುಂದೆ ಇನ್ನೂ 4 ಟಿ20 ಪಂದ್ಯಗಳಿವೆ. ಈ ನಾಲ್ಕು ಪಂದ್ಯಗಳಲ್ಲಿ ಗೆದ್ದರೆ ಸತತ ಗೆಲುವಿನ ಸಂಖ್ಯೆ 13 ಕ್ಕೇರಲಿದೆ.

ಹೀಗಾಗಿಯೇ ಸೌತ್ ಆಫ್ರಿಕಾ ತಂಡವು ಆಸ್ಟ್ರೇಲಿಯಾ ವಿರುದ್ಧ 5-0 ಅಂತರದಿಂದ ಸರಣಿ ಸೋತರೆ, ಟೀಮ್ ಇಂಡಿಯಾದ 12 ಜಯಗಳ ದಾಖಲೆ ಅಳಿಸಿ ಹೋಗಲಿದೆ. ಅಲ್ಲದೆ ಆಸ್ಟ್ರೇಲಿಯಾ ತಂಡದ ಹೆಸರಿಗೆ ಹೊಸ ವಿಶ್ವ ದಾಖಲೆ ಸೇರ್ಪಡೆಯಾಗಲಿದೆ. ಹೀಗಾಗಿಯೇ ಭಾರತ ತಂಡದ ವಿಶೇಷ ವಿಶ್ವ ದಾಖಲೆಯ ಭವಿಷ್ಯ ಸದ್ಯ ಸೌತ್ ಆಫ್ರಿಕಾ ತಂಡದ ಕೈಯಲ್ಲಿದೆ.
Published On - 9:30 am, Tue, 12 August 25
