
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಆರಂಭಕ್ಕೂ ಮುನ್ನ ಎರಡು ಫ್ರಾಂಚೈಸಿಗಳ ಮಾಲೀಕರು ಬದಲಾಗುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಡಿಯಾಜಿಯೋ ಕಂಪೆನಿಯು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಮಾರಾಟಕ್ಕೆ ಬಿಡ್ಡಿಂಗ್ ಆಹ್ವಾನಿಸಿದೆ.

ಇದರ ಬೆನ್ನಲ್ಲೇ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯನ್ನು ಸಹ ಮಾರಾಟ ಮಾಡಲು ರಾಯಲ್ಸ್ ಸ್ಪೋರ್ಟ್ಸ್ ಗ್ರೂಪ್ ಮುಂದಾಗಿದೆ. ಅದರಂತೆ ಇದೀಗ ಆರ್ಆರ್ ತಂಡದ ಖರೀದಿಗೂ ಬಿಡ್ಡಿಂಗ್ಗಳನ್ನು ಆಹ್ವಾನಿಸಲಾಗಿದೆ. ಹೀಗಾಗಿ ಐಪಿಎಲ್ ಆರಂಭಕ್ಕೂ ಮುನ್ನ ಆರ್ಸಿಬಿ ಮತ್ತು ಆರ್ಆರ್ ತಂಡಗಳ ಮಾಲೀಕರು ಬದಲಾಗುವ ಸಾಧ್ಯತೆ ಹೆಚ್ಚಿದೆ.

ಇಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಖರೀದಿಗೆ ಕ್ಯಾಪ್ರಿ ಗ್ಲೋಬಲ್ ಆಸಕ್ತಿ ತೋರಿರುವುದು ವಿಶೇಷ. ಐಪಿಎಲ್ನಲ್ಲಿ 18 ವರ್ಷಗಳನ್ನು ಪೂರೈಸಿರುವ ಹಳೆಯ ಫ್ರಾಂಚೈಸಿಯನ್ನು ಬಹುಪಾಲನ್ನು ಖರೀದಿಸಲು ಕ್ಯಾಪ್ರಿ ಗ್ಲೋಬಲ್ ಮಾತುಕತೆ ನಡೆಸಿದೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಕ್ಯಾಪ್ರಿ ಗ್ಲೋಬಲ್ ಪಾಲಾಗುವ ಸಾಧ್ಯತೆ ಹೆಚ್ಚಿದೆ.

ಕುತೂಹಲಕಾರಿ ವಿಷಯ ಎಂದರೆ, ಕ್ಯಾಪ್ರಿ ಗ್ಲೋಬಲ್ ಕಂಪೆನಿಯು ಈಗಾಗಲೇ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಯುಪಿ ವಾರಿಯರ್ಸ್ ಹೆಸರಿನ ತಂಡವೊಂದನ್ನು ಕಣಕ್ಕಿಳಿಸುತ್ತಿದೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯನ್ನು ಕ್ಯಾಪ್ರಿ ಗ್ಲೋಬಲ್ ಖರೀದಿಸಿದರೆ ಆರ್ಆರ್ ತಂಡದ ಹೆಸರು ಬದಲಾವಣೆಯಾಗುವುದು ಖಚಿತ. ಅದರಂತೆ ರಾಜಸ್ಥಾನ್ ರಾಯಲ್ಸ್ ಬದಲಿಗೆ ಐಪಿಎಲ್ನಲ್ಲಿ ಯುಪಿ ವಾರಿಯರ್ಸ್ ಹೆಸರಿನ ತಂಡ ಕಣಕ್ಕಿಳಿಯಲಿದೆ.

ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಖರೀದಿಗೆ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್‌ಬಾಲ್ ಕ್ಲಬ್ ಮಾಲೀಕರಾದ ಅವ್ರಾಮ್ ಗ್ಲೇಝರ್ ಬಿಡ್ ಸಲ್ಲಿಸಿದ್ದಾರೆ. ಇವರೊಂದಿಗೆ ಅದಾನಿ ಗ್ರೂಪ್, ಆದಾರ್ ಪೂನವಾಲ ಸೇರಿದಂತೆ ಕೆಲ ಉದ್ಯಮಿಗಳು ಆರ್ಸಿಬಿ ಫ್ರಾಂಚೈಸಿಯ ಖರೀದಿಗೆ ಆಸಕ್ತಿ ತೋರಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರು ಕೂಡ ಬದಲಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
Published On - 3:09 pm, Tue, 10 February 26