RCB ದಾಖಲೆ ಉಡೀಸ್ ಮಾಡಿದ CSK
IPL 2025 CSK vs GT: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 67ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 230 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು ಕೇವಲ 147 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಸಿಎಸ್ಕೆ ತಂಡ 83 ರನ್ಗಳ ಭರ್ಜರಿ ಜಯ ಸಾಧಿಸಿದೆ.
Updated on: May 26, 2025 | 12:30 PM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಹೊಸ ದಾಖಲೆ ಬರೆದಿದೆ. ಅದು ಕೂಡ ತನ್ನ ಸಾಂಪ್ರದಾಯಿಕ ಎದುರಾಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಶೇಷ ದಾಖಲೆಯೊಂದನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 230 ರನ್ ಕಲೆಹಾಕಿತು. ಈ 230 ರನ್ಗಳೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಬಾರಿ 200+ ಸ್ಕೋರ್ಗಳಿಸಿದ ತಂಡವೆಂಬ ದಾಖಲೆ ಸಿಎಸ್ಕೆ ಪಾಲಾಯಿತು.

ಇದಕ್ಕೂ ಮುನ್ನ ಈ ವಿಶೇಷ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿತ್ತು. ಆರ್ಸಿಬಿ ತಂಡವು ಈವರೆಗೆ 268 ಪಂದ್ಯಗಳನ್ನಾಡಿದ್ದು, ಈ ವೇಳೆ 33 ಬಾರಿ 200+ ಸ್ಕೋರ್ಗಳಿಸಿದೆ. ಈ ಮೂಲಕ ಐಪಿಎಲ್ನಲ್ಲಿ ಅತ್ಯಧಿಕ ಬಾರಿ ಇನ್ನೂರಕ್ಕಿಂತ ಅಧಿಕ ಮೊತ್ತಗಳಿಸಿದ ತಂಡ ಎನಿಸಿಕೊಂಡಿತು.

ಇದೀಗ ಆರ್ಸಿಬಿ ತಂಡದ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಶಸ್ವಿಯಾಗಿದೆ. ಸಿಎಸ್ಕೆ ತಂಡವು ಈವರೆಗೆ 253 ಪಂದ್ಯಗಳನ್ನಾಡಿದ್ದು, ಈ ವೇಳೆ ಒಟ್ಟು 35 ಬಾರಿ 200+ ಸ್ಕೋರ್ಗಳಿಸಿದೆ. ಅಂದರೆ ಈ ಬಾರಿಯ ಐಪಿಎಲ್ನಲ್ಲಿ 2 ಬಾರಿ 200ಕ್ಕಿಂತ ಅಧಿಕ ಸ್ಕೋರ್ಗಳಿಸುವ ಮೂಲಕ ಸಿಎಸ್ಕೆ ತಂಡವು ಆರ್ಸಿಬಿ ತಂಡದ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದೆ.

ಹಾಗೆಯೇ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 83 ರನ್ಗಳ ಜಯ ಸಾಧಿಸುವುದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ 80 ಕ್ಕಿಂತ ಅಧಿಕ ರನ್ಗಳ ಅಂತರದಿಂದ ಗೆದ್ದ ತಂಡವೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಹೆಸರಿನಲ್ಲಿತ್ತು. ಉಭಯ ತಂಡಗಳು ಒಟ್ಟು 7 ಬಾರಿ 80 ಕ್ಕೂ ಅಧಿಕ ರನ್ಗಳ ಅಂತರದಿಂದ ಗೆದ್ದಿದ್ದರು. ಇದೀಗ 8ನೇ ಬಾರಿ 80 ಕ್ಕಿಂತ ಅಧಿಕ ರನ್ಗಳ ಅಂತರದಿಂದ ಜಯ ಸಾಧಿಸಿ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.




