David Warner: ವಾರ್ನರ್ ಅಬ್ಬರಕ್ಕೆ ಅಲೆಕ್ಸ್ ದಾಖಲೆ ಧೂಳೀಪಟ
Australia vs West Indies: ಪರ್ತ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 220 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 183 ರನ್ ಗಳಿಸಲಷ್ಟೇ ಶಕ್ತರಾದರು.
Updated on:Feb 14, 2024 | 9:01 AM

ಪರ್ತ್ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಡೇವಿಡ್ ವಾರ್ನರ್ (David Warner) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಎಡಗೈ ದಾಂಡಿಗ ಸ್ಪೋಟಕ ಬ್ಯಾಟಿಂಗ್ನೊಂದಿಗೆ ಅಬ್ಬರಿಸಿದ್ದರು.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ವಾರ್ನರ್ ಕೇವಲ 49 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 81 ರನ್ ಚಚ್ಚಿದರು. ಈ ಅರ್ಧಶತಕದೊಂದಿಗೆ ವಾರ್ನರ್ ಟಿ20 ಕ್ರಿಕೆಟ್ನಲ್ಲಿ 12 ಸಾವಿರ ರನ್ ಪೂರೈಸಿದ್ದಾರೆ. ಅದು ಕೂಡ ಅತೀ ವೇಗವಾಗಿ ಎಂಬುದು ವಿಶೇಷ.

ಅಂದರೆ ಟಿ20 ಕ್ರಿಕೆಟ್ನಲ್ಲಿ ಅತೀ ವೇಗವಾಗಿ 12 ಸಾವಿರ ರನ್ ಪೂರೈಸಿದ ವಿಶ್ವದ 2ನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಡೇವಿಡ್ ವಾರ್ನರ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್ನ ಅಲೆಕ್ಸ್ ಹೇಲ್ಸ್ ಹೆಸರಿನಲ್ಲಿತ್ತು.

ಇಂಗ್ಲೆಂಡ್ ಪರ ಹಾಗೂ ವಿಶ್ವದ ಹಲವು ಟಿ20 ಲೀಗ್ಗಳಲ್ಲಿ ಕಣಕ್ಕಿಳಿದಿರುವ ಅಲೆಕ್ಸ್ ಹೇಲ್ಸ್ 435 ಪಂದ್ಯಗಳ ಮೂಲಕ 12 ಸಾವಿರ ರನ್ ಪೂರೈಸಿದ್ದರು. ಇದೀಗ ಈ ದಾಖಲೆಯನ್ನು ಮುರಿದು ವಾರ್ನರ್ ವೇಗದ ರನ್ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.

ಆಸ್ಟ್ರೇಲಿಯಾ ಪರ ಹಾಗೂ ಇತರೆ ಹಲವು ಟಿ20 ಲೀಗ್ಗಳಲ್ಲಿ ಕಣಕ್ಕಿಳಿದಿರುವ ಡೇವಿಡ್ ವಾರ್ನರ್ 12 ಸಾವಿರ ರನ್ ಪೂರೈಸಲು ತೆಗೆದುಕೊಂಡಿರುವುದು ಕೇವಲ 369 ಇನಿಂಗ್ಸ್ಗಳನ್ನು ಮಾತ್ರ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ವೇಗವಾಗಿ 12 ಸಾವಿರ ರನ್ ಕಲೆಹಾಕಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿರುವುದು ಯೂನಿವರ್ಸ್ ಬಾಸ್ ಕ್ರಿಸ್ ಗೇಲ್. ವೆಸ್ಟ್ ಇಂಡೀಸ್ ಪರ ಹಾಗೂ ವಿಶ್ವದ ಹಲವು ಟಿ20 ಲೀಗ್ಗಳಲ್ಲಿ ಬ್ಯಾಟ್ ಬೀಸಿರುವ ಗೇಲ್ 353 ಪಂದ್ಯಗಳ ಮೂಲಕ 12 ಸಾವಿರ ರನ್ ಕಲೆಹಾಕಿದ್ದರು. ಈ ಮೂಲಕ ಕ್ರಿಸ್ ಗೇಲ್ ವಿಶೇಷ ವಿಶ್ವ ದಾಖಲೆ ಬರೆದಿಟ್ಟಿದ್ದಾರೆ.
Published On - 8:59 am, Wed, 14 February 24
