
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 14ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ (GT) ವಿರುದ್ಧದ ಈ ಪಂದ್ಯದಲ್ಲಿ ಒಂದು ರನ್ನ ಸೋಲಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವು ವಿಶೇಷ ದಾಖಲೆಯೊಂದನ್ನು ಬರೆದಿದೆ.

ಈ ಮ್ಯಾಚ್ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ಶುಭ್ಮನ್ ಗಿಲ್ (70), ಜೋಸ್ ಬಟ್ಲರ್ (52) ಹಾಗೂ ವಾಷಿಂಗ್ಟನ್ ಸುಂದರ್ (55) ಅವರ ಅರ್ಧಶತಕಗಳ ನೆರವಿನೊಂದಿಗೆ 20 ಓವರ್ಗಳಲ್ಲಿ 210 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲ್ಲಲು ಕೊನೆಯ ಓವರ್ನಲ್ಲಿ 13 ರನ್ಗಳು ಬೇಕಿದ್ದವು. ಆದರೆ ಅಂತಿಮ ಓವರ್ನಲ್ಲಿ ಕಲೆಹಾಕಿದ್ದು ಕೇವಲ 11 ರನ್ಗಳು ಮಾತ್ರ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಒಂದು ರನ್ನಿಂದ ಸೋಲೊಪ್ಪಿಕೊಂಡಿತು.

ಈ ಸೋಲಿನೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ 1 ರನ್ನಿಂದ ಸೋತ ತಂಡವೆಂಬ ಹಣೆಪಟ್ಟಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದೆ. ಅಂದರೆ ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಪಡೆಯು ಮೂರು ಬಾರಿ ಒಂದು ರನ್ ಅಂತರದಿಂದ ಸೋತ ನಿದರ್ಶನಗಳಿವೆ.

2015 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಒಂದು ರನ್ಗಳ ಅಂತರದಿಂದ ಮೊದಲ ಬಾರಿಗೆ ಸೋತಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು, 2016 ರಲ್ಲಿ ಗುಜರಾತ್ ಲಯನ್ಸ್ ತಂಡದ ವಿರುದ್ಧ ಒಂದು ರನ್ನಿಂದನೇ ಸೋಲೊಪ್ಪಿಕೊಂಡಿದ್ದರು. ಇನ್ನು 2021 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 1 ರನ್ನ ಅಂತರದಿಂದ ಸೋಲನುಭವಿಸಿದ್ದರು.

ಇದೀಗ ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 1 ರನ್ ಅಂತರದಿಂದ ಸೋಲೊಪ್ಪಿಕೊಂಡಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಒಂದು ರನ್ ಅಂತರದಿಂದ ಸೋತ ತಂಡವೆಂಬ ದಾಖಲೆಯನ್ನು ನಿರ್ಮಿಸಿದೆ.