- Kannada News Photo gallery Cricket photos DPL 2024: Anuj Rawat and Sujal Singh record 2nd highest opening partnership in T20s
ಆರಂಭಿಕರಿಬ್ಬರ ಅಜೇಯ ಶತಕ: ಟಿ20 ಕ್ರಿಕೆಟ್ನಲ್ಲಿ ವಿಶ್ವ ದಾಖಲೆ ನಿರ್ಮಾಣ
DPL 2024: ಡೆಲ್ಲಿ ಪ್ರೀಮಿಯರ್ ಲೀಗ್ನ 26ನೇ ಪಂದ್ಯದಲ್ಲಿ ಈಸ್ಟ್ ಡೆಲ್ಲಿ ರೈಡರ್ಸ್ ತಂಡವು 26 ರನ್ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಈಸ್ಟ್ ಡೆಲ್ಲಿ ರೈಡರ್ಸ್ 20 ಓವರ್ಗಳಲ್ಲಿ 241 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಪುರಾಣಿ ಡೆಲ್ಲಿ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 215 ರನ್ ಗಳಿಸಲಷ್ಟೇ ಶಕ್ತರಾದರು.
Updated on: Aug 31, 2024 | 8:53 AM

ಡೆಲ್ಲಿ ಪ್ರೀಮಿಯರ್ ಲೀಗ್ ಅಪರೂಪದ ಸ್ಕೋರ್ ಕಾರ್ಡ್ಗೆ ಸಾಕ್ಷಿಯಾಗಿದೆ. ಅದು ಸಹ ಯುವ ಆರಂಭಿಕರಿಬ್ಬರ ಸಿಡಿಲಬ್ಬರದ ಅಜೇಯ ಶತಕದೊಂದಿಗೆ ಎಂಬುದು ವಿಶೇಷ. ಡಿಪಿಎಲ್ನ 26ನೇ ಪಂದ್ಯದಲ್ಲಿ ಈಸ್ಟ್ ಡೆಲ್ಲಿ ರೈಡರ್ಸ್ ಹಾಗೂ ಪುರಾಣಿ ಡೆಲ್ಲಿ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಪುರಾಣಿ ಡೆಲ್ಲಿ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಈಸ್ಟ್ ಡೆಲ್ಲಿ ರೈಡರ್ಸ್ ಪರ ಅನೂಜತ್ ರಾವತ್ ಹಾಗೂ ಸುಜಲ್ ಸಿಂಗ್ ಇನಿಂಗ್ಸ್ ಆರಂಭಿಸಿದ್ದರು. ಮೊದಲ ಓವರ್ನಿಂದ ಆರಂಭವಾದ ಇವರಿಬ್ಬರ ಇನಿಂಗ್ಸ್ ಕೊನೆಗೊಂಡಿದ್ದು 20ನೇ ಓವರ್ನಲ್ಲಿ ಎಂಬುದು ವಿಶೇಷ. ಅಂದರೆ ಇಬ್ಬರೂ ಸಹ ಕೊನೆಯವರೆಗೆ ಅಜೇಯರಾಗಿ ಉಳಿದರು.

ಇದರ ನಡುವೆ 66 ಎಸೆತಗಳನ್ನು ಎದುರಿಸಿದ ಅನೂಜ್ ರಾವತ್ 11 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಅಜೇಯ 121 ರನ್ ಬಾರಿಸಿದರೆ, ಸುಜಲ್ ಸಿಂಗ್ 57 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಅಜೇಯ 108 ರನ್ ಸಿಡಿಸಿದರು. ಈ ಮೂಲಕ ಈಸ್ಟ್ ಡೆಲ್ಲಿ ರೈಡರ್ಸ್ ತಂಡವು 20 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 241 ರನ್ ಕಲೆಹಾಕಿದೆ.

ಇದು ಭಾರತೀಯ ಟಿ20 ಕ್ರಿಕೆಟ್ನಲ್ಲಿ ಹೊಸ ದಾಖಲೆಯಾಗಿದೆ. ಅಲ್ಲದೆ ಆರಂಭಿಕರಿಬ್ಬರು ಆಜೇಯರಾಗಿ ಉಳಿದು ಅತ್ಯಧಿಕ ಮೊತ್ತ ಪೇರಿಸಿದ ವಿಶ್ವ ದಾಖಲೆ ಪಟ್ಟಿಯಲ್ಲೂ ಅನೂಜ್-ಸುಜಲ್ ಹೆಸರು ಸೇರ್ಪಡೆಯಾಗಿದೆ. ಹಾಗೆಯೇ ಈ ಸಾಧನೆ ಮಾಡಿದ ವಿಶ್ವದ 2ನೇ ಜೋಡಿ ಎಂಬ ಹೆಗ್ಗಳಿಕೆಗೂ ಈಸ್ಟ್ ಡೆಲ್ಲಿ ರೈಡರ್ಸ್ ತಂಡದ ಆರಂಭಿಕರು ಪಾತ್ರರಾಗಿದ್ದಾರೆ.

ಈ ಸಾಧನೆ ಮಾಡಿದ ಮೊದಲ ಜೋಡಿ ಜಪಾನ್ನ ಲಾಚ್ಲಾನ್ ಹಾಗೂ ಕೆಂಡಲ್. ಫೆಬ್ರವರಿಯಲ್ಲಿ ನಡೆದ ಪೂರ್ವ ಏಷ್ಯಾಕಪ್ ಟಿ20 ಟೂರ್ನಿ ಪಂದ್ಯದಲ್ಲಿ ಚೀನಾ ವಿರುದ್ಧ ಜಪಾನ್ ತಂಡದ ಆರಂಭಿಕರಾದ ಲಾಚ್ಲಾನ್ (134) ಹಾಗೂ ಕೆಂಡಲ್ (109) ಅಜೇಯ ಶತಕ ಬಾರಿಸಿ ಮಿಂಚಿದ್ದರು. ಅಲ್ಲದೆ ಈ ಪಂದ್ಯದಲ್ಲಿ ಜಪಾನ್ ತಂಡವು 20 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 258 ರನ್ ಕಲೆಹಾಕಿತ್ತು.

ಇದೀಗ ಲಾಚ್ಲಾನ್ ಹಾಗೂ ಕೆಂಡಲ್ ನಿರ್ಮಿಸಿದ ವಿಶ್ವ ದಾಖಲೆಯನ್ನು ಅನೂಜ್ ರಾವತ್ ಹಾಗೂ ಸುಜಲ್ ಸಿಂಗ್ ಸರಿಗಟ್ಟಿದ್ದಾರೆ. ಅಷ್ಟೇ ಅಲ್ಲದೆ ಟಿ20 ಕ್ರಿಕೆಟ್ನಲ್ಲಿ ಮೊದಲ ವಿಕೆಟ್ಗೆ ಅತ್ಯಧಿಕ ರನ್ ಪೇರಿಸಿದ ವಿಶ್ವದ 2ನೇ ಜೋಡಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಮೂಲಕ ಅನೂಜ್ ರಾವತ್ ಹಾಗೂ ಸುಜಲ್ ಸಿಂಗ್ ಟಿ20 ಕ್ರಿಕೆಟ್ನಲ್ಲಿ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.
