Updated on:May 16, 2023 | 10:32 PM
ICC New Rules: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮೂರು ನಿಯಮಗಳನ್ನು ಬದಲಿಸಿದೆ. ಇದರಲ್ಲಿ ಒಂದು ನಿಯಮವನ್ನು ಸಂಪೂರ್ಣ ರದ್ದುಗೊಳಿಸಿದರೆ, ಇನ್ನೆರಡು ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಅದರಂತೆ ಐಸಿಸಿ ಬದಲಿಸಿರುವ ನಿಯಮಗಳು ಈ ಕೆಳಗಿನಂತಿದೆ.
1- ಸಾಫ್ಟ್ ಸಿಗ್ನಲ್ ರದ್ದು: ಇನ್ಮುಂದೆ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಂಪೈರ್ ಸಾಫ್ಟ್ ಸಿಗ್ನಲ್ ನೀಡುವಂತಿಲ್ಲ. ಅಂದರೆ ಇದಕ್ಕೂ ಮುನ್ನ ಸಾಮಾನ್ಯವಾಗಿ ಕ್ಯಾಚ್ ಔಟ್ ಆದಾಗ ಫೀಲ್ಡ್ ಅಂಪೈರ್ಗೆ ಸಂಶಯಗಳಿದ್ದರೆ ಸಾಫ್ಟ್ ಸಿಗ್ನಲ್ ಮೂಲಕ ಔಟ್ ನೀಡುತ್ತಿದ್ದರು. ಅಲ್ಲದೆ ಆ ಬಳಿಕ ಮೂರನೇ ಅಂಪೈರ್ಗೆ ಮನವಿ ಮಾಡುತ್ತಿದ್ದರು. ಇನ್ಮುಂದೆ ಹೀಗೆ ಸಾಫ್ಟ್ ಸಿಗ್ನಲ್ ನೀಡಬೇಕಿಲ್ಲ. ಬದಲಾಗಿ ತೀರ್ಪು ನೀಡಲು ಸಂಶಯಗಳಿದ್ದರೆ ನೇರವಾಗಿ ಮೂರನೇ ಅಂಪೈರ್ಗೆ ಮನವಿ ಮಾಡಬಹುದು.
2- ಹೆಲ್ಮೆಟ್ ಕಡ್ಡಾಯ: ಆಟಗಾರರ ಸುರಕ್ಷತೆಗಳನ್ನು ಹೆಚ್ಚಿಸಲು ಐಸಿಸಿ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಅದರಂತೆ ವೇಗಿಗಳನ್ನು ಎದುರಿಸುವಾಗ ಬ್ಯಾಟರ್ಗಳು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಿದೆ. ಹಾಗೆಯೇ ವಿಕೆಟ್ ಸಮೀಪ ನಿಂತು ಕೀಪಿಂಗ್ ಮಾಡುವಾಗ ವಿಕೆಟ್ ಕೀಪರ್ಗಳು ಕೂಡ ಹೆಲ್ಮೆಟ್ ಧರಿಸುವುದು ಸಹ ಕಡ್ಡಾಯ. ಇನ್ನು ಫೀಲ್ಡರ್ ಬ್ಯಾಟ್ಸ್ಮನ್ ಬಳಿ ನಿಂತು ಫೀಲ್ಡಿಂಗ್ ಮಾಡುವಾಗಲೂ ಹೆಲ್ಮೆಟ್ ಧರಿಸಬೇಕೆಂದು ಐಸಿಸಿ ಸೂಚಿಸಿದೆ.
3- ಫ್ರೀ ಹಿಟ್ ಬೌಲ್ಡ್ ರನ್: ಫ್ರೀ ಹಿಟ್ ಎಸೆತಗಳಲ್ಲಿ ಬೌಲ್ಡ್ ಆದರೂ, ಆ ವೇಳೆ ರನ್ ಓಡಬಹುದು ಎಂಬುದನ್ನು ಐಸಿಸಿ ದೃಢೀಕರಿಸಿದೆ. ಅಂದರೆ ಬಾಲ್ ಸ್ಟಂಪ್‌ಗೆ ಬಡಿದಾಗ ಫ್ರೀ ಹಿಟ್‌ನಿಂದ ಗಳಿಸಿದ ಯಾವುದೇ ರನ್‌ಗಳನ್ನು ಬ್ಯಾಟರ್ ಸ್ಥಿರವಾಗಿ ಗಳಿಸಿದ ರನ್ ಎಂದು ಪರಿಗಣಿಸಲಾಗುತ್ತದೆ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ವೇಳೆ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಫ್ರೀ ಹಿಟ್ನಲ್ಲಿ ಬೌಲ್ಡ್ ಆಗಿ 3 ರನ್ ಓಡಿದ್ದರು. ಇದರಿಂದ ಗೊಂದಲಗಳು ಏರ್ಪಟ್ಟಿತ್ತು. ಇಂತಹ ಗೊಂದಲಗಳನ್ನು ದೂರ ಮಾಡಲು ಇದೀಗ ಐಸಿಸಿ ಫ್ರೀ ಹಿಟ್ನಲ್ಲಿ ಬೌಲ್ಡ್ ಆದರೂ ರನ್ ಓಡಬಹುದು ಎಂಬುದನ್ನು ಸ್ಪಷ್ಟಪಡಿಸಿದೆ.
ಇಲ್ಲಿ ಸಾಫ್ಟ್ ಸಿಗ್ನಲ್ ರದ್ದು ಮಾಡಲು ಮುಖ್ಯ ಕಾರಣ, ಫೀಲ್ಡ್ ಅಂಪೈರ್ ಸಾಫ್ಟ್ ಸಿಗ್ನಲ್ ನೀಡಿ ಮೂರನೇ ಅಂಪೈರ್ ಪರಿಶೀಲನೆ ವೇಳೆಯೂ ಔಟಾ ಅಥವಾ ನಾಟೌಟಾ ಎಂಬ ಗೊಂದಲ ಮೂಡಿದರೆ, ಸಾಫ್ಟ್ ಸಿಗ್ನಲ್ನಲ್ಲಿ ಔಟ್ ನೀಡಿರುವುದನ್ನು ಪರಿಗಣಿಸಿ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಬೇಕಿತ್ತು. ಇನ್ಮುಂದೆ ಅಂತಹ ಗೊಂದಲಕ್ಕೆ ತೆರೆ ಎಳೆಯಲು ಸಾಫ್ಟ್ ಸಿಗ್ನಲ್ ಅನ್ನು ರದ್ದುಗೊಳಿಸಲಾಗಿದೆ.
ಈ ಎಲ್ಲಾ ನಿಯಮಗಳು ಜೂನ್ ತಿಂಗಳಿನಿಂದ ಜಾರಿಗೆ ಬರಲಿದೆ. ಅಂದರೆ ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾಗೂ ಏಕದಿನ ವಿಶ್ವಕಪ್ನಲ್ಲಿ ಹೊಸ ನಿಯಮಗಳಿರಲಿದೆ.
Published On - 10:08 pm, Tue, 16 May 23