- Kannada News Photo gallery Cricket photos Kannada News | IPL 2023: Rcb and Mumbai Indians Playoffs Scenario
IPL 2023: SRH ಕೈಯಲ್ಲಿದೆ RCB, ಮುಂಬೈ ಇಂಡಿಯನ್ಸ್ ಪ್ಲೇಆಫ್ ಭವಿಷ್ಯ..!
IPL 2023 Kannada: ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ 15 ಅಂಕಗಳನ್ನು ಕಲೆಹಾಕಿರುವ ಸಿಎಸ್ಕೆ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡವು 15 ಅಂಕಗಳೊಂದಿಗೆ ಕ್ರಮವಾಗಿ 2ನೇ ಮತ್ತು 3ನೇ ಸ್ಥಾನದಲ್ಲಿದೆ.
Updated on: May 17, 2023 | 4:21 PM

IPL 2023: ಐಪಿಎಲ್ನ ಪ್ಲೇಆಫ್ ರೇಸ್ ಇದೀಗ ಕುತೂಹಲ ಘಟ್ಟದತ್ತ ಸಾಗುತ್ತಿದೆ. ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ತಲುಪಿದರೂ ಪ್ಲೇಆಫ್ ಖಚಿತಪಡಿಸಿಕೊಂಡಿರುವುದು ಗುಜರಾತ್ ಟೈಟಾನ್ಸ್ ಮಾತ್ರ. ಇನ್ನುಳಿದ 3 ಸ್ಥಾನಗಳಿಗಾಗಿ ಪೈಪೋಟಿ ಮುಂದುವರೆದಿದೆ.

ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ 15 ಅಂಕಗಳನ್ನು ಕಲೆಹಾಕಿರುವ ಸಿಎಸ್ಕೆ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡವು 15 ಅಂಕಗಳೊಂದಿಗೆ ಕ್ರಮವಾಗಿ 2ನೇ ಮತ್ತು 3ನೇ ಸ್ಥಾನದಲ್ಲಿದೆ. ಇನ್ನು 14 ಪಾಯಿಂಟ್ಸ್ ಹೊಂದಿರುವ ಮುಂಬೈ ಇಂಡಿಯನ್ಸ್ 4ನೇ ಸ್ಥಾನ ಅಲಂಕರಿಸಿದೆ.

ಈ ಮೂರು ತಂಡಗಳಿಗೂ ಒಂದೊಂದು ಪಂದ್ಯ ಬಾಕಿಯಿದ್ದು, ಈ ಪಂದ್ಯದಲ್ಲಿ ಗೆದ್ದರೆ ಪ್ಲೇಆಫ್ ಪ್ರವೇಶಿಸಬಹುದು. ಇಲ್ಲಿ ಸಿಎಸ್ಕೆ ತಂಡದ ಮುಂದಿನ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್. ಹಾಗೆಯೇ ಲಕ್ನೋ ಸೂಪರ್ ಜೈಂಟ್ಸ್ ತನ್ನ ಕೊನೆಯ ಪಂದ್ಯವನ್ನು ಕೆಕೆಆರ್ ವಿರುದ್ಧ ಆಡಲಿದೆ. ಈ ಪಂದ್ಯಗಳಲ್ಲಿ ಮುಂಬೈ, ಲಕ್ನೋ ಗೆದ್ದರೆ 17 ಅಂಕಗಳೊಂದಿಗೆ 2ನೇ ಹಾಗೂ 3ನೇ ಸ್ಥಾನ ಖಚಿತಪಡಿಸಿಕೊಳ್ಳಬಹುದು.

ಆದರೆ ನಾಲ್ಕನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಮುಂದಿನ ಪಂದ್ಯದಲ್ಲಿ ಜಯ ಸಾಧಿಸಿದರೂ ನೆಟ್ ರನ್ ರೇಟ್ನ ಮೊರೆ ಹೋಗಬೇಕಾಗಿ ಬರಬಹುದು. ಏಕೆಂದರೆ 12 ಪಾಯಿಂಟ್ಸ್ನೊಂದಿಗೆ ಪ್ಲೇಆಫ್ ರೇಸ್ನಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಆರ್ಸಿಬಿಗೆ ಇನ್ನೆರಡು ಪಂದ್ಯಗಳು ಬಾಕಿಯಿವೆ.

ಈ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ 16 ಪಾಯಿಂಟ್ಸ್ನೊಂದಿಗೆ ನಾಲ್ಕನೇ ಸ್ಥಾನ ಅಲಂಕರಿಸುವ ಉತ್ತಮ ಅವಕಾಶ ಪಂಜಾಬ್ ಕಿಂಗ್ಸ್ ಹಾಗೂ ಆರ್ಸಿಬಿಗಿದೆ. ಅಂದರೆ ಮುಂಬೈ ಇಂಡಿಯನ್ಸ್ ಮುಂದಿನ ಪಂದ್ಯ ಗೆದ್ದರೂ ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ಫಲಿತಾಂಶವನ್ನು ಎದುರು ನೋಡಬೇಕು.

ಇಲ್ಲಿ ವಿಶೇಷ ಎಂದರೆ ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿ ತಂಡಗಳು ಮುಂದಿನ ಪಂದ್ಯಗಳನ್ನು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಈ ಪಂದ್ಯಗಳಲ್ಲಿ ಎಸ್ಆರ್ಹೆಚ್ ಸೋತರೆ ಮಾತ್ರ ಉಭಯ ತಂಡಗಳು ಪ್ಲೇಆಫ್ ರೇಸ್ನಲ್ಲಿ ಉಳಿಯಲಿದೆ. ಅಂದರೆ ಮುಂಬೈ ಗೆದ್ದರೆ 16 ಪಾಯಿಂಟ್ಸ್ಗಳಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಉಳಿಯಲಿದೆ.

ಇನ್ನು ಎಸ್ಆರ್ಹೆಚ್ ವಿರುದ್ಧ ಆರ್ಸಿಬಿ ಗೆದ್ದರೆ 14 ಅಂಕಗಳೊಂದಿಗೆ ಪ್ಲೇಆಫ್ ರೇಸ್ನಲ್ಲಿ ಉಳಿಯಲಿದೆ. ಅಲ್ಲದೆ ಗುಜರಾತ್ ಟೈಟಾನ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಆರ್ಸಿಬಿ ಉತ್ತಮ ನೆಟ್ ರನ್ ರೇಟ್ನೊಂದಿಗೆ ಭರ್ಜರಿ ಜಯ ಸಾಧಿಸಬೇಕು. ಈ ಮೂಲಕ ಅಂಕ ಪಟ್ಟಿಯಲ್ಲಿ 4ನೇ ಸ್ಥಾನ ಅಲಂಕರಿಸಿ ಪ್ಲೇಆಫ್ ಪ್ರವೇಶಿಸುವ ಅವಕಾಶ ಆರ್ಸಿಬಿಗೆ ದೊರೆಯಲಿದೆ.

ಒಂದು ವೇಳೆ ಉಭಯ ತಂಡಗಳಿಗೂ ಎಸ್ಆರ್ಹೆಚ್ ಸೋಲುಣಿಸಿದರೆ ಮುಂದಿನ 2 ಪಂದ್ಯಗಳನ್ನು ಗೆದ್ದು ಪಂಜಾಬ್ ಕಿಂಗ್ಸ್ ಸುಲಭವಾಗಿ ಪ್ಲೇಆಫ್ ಪ್ರವೇಶಿಸಬಹುದು. ಹೀಗಾಗಿ ಎಸ್ಆರ್ಹೆಚ್ ವಿರುದ್ಧದ ಈ 2 ಪಂದ್ಯಗಳನ್ನು ಪಂಜಾಬ್ ಕಿಂಗ್ಸ್ ಕೂಡ ಎದುರು ನೋಡುತ್ತಿದೆ.

ಒಟ್ಟಿನಲ್ಲಿ ಪ್ಲೇಆಫ್ ರೇಸ್ ರಣರೋಚಕ ಘಟ್ಟಕ್ಕೆ ತಲುಪುತ್ತಿದ್ದಂತೆ ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿಗೆ ಮುಂದಿನ ಎದುರಾಳಿಯಾಗಿ ಸನ್ರೈಸರ್ಸ್ ಹೈದರಾಬಾದ್ ತಂಡವೇ ಸಿಕ್ಕಿರುವುದು ಕುತೂಹಲವನ್ನು ಹೆಚ್ಚಿಸಿದೆ. ಹೀಗಾಗಿಯೇ ಉಭಯ ತಂಡಗಳ ಪ್ಲೇಆಫ್ ಭವಿಷ್ಯ ಎಸ್ಆರ್ಹೆಚ್ ಕೈಯಲ್ಲಿದೆ ಎಂದರೆ ತಪ್ಪಾಗಲಾರದು.
