ನ್ಯೂಜಿಲೆಂಡ್‌ನ ಯುವ ಆಟಗಾರ ಹಾಗೂ ಕರ್ನಾಟಕ ಮೂಲದ ರಚಿನ್ ರವೀಂದ್ರ ಐಸಿಸಿ 2023 ರ ವರ್ಷದ ಉದಯೋನ್ಮುಖ ಕ್ರಿಕೆಟಿಗರಾಗಿ ಆಯ್ಕೆಯಾಗಿದ್ದಾರೆ. ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ರಚಿನ್ ರವೀಂದ್ರ ನೀಡಿದ ಅತ್ಯುತ್ತಮ ಪ್ರದರ್ಶನದ ಆಧಾರದ ಮೇಲೆ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ವಾಸ್ತವವಾಗಿ ವರ್ಷದ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿ ರೇಸ್ನಲ್ಲಿ ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಜೆರಾಲ್ಡ್ ಕೋಟ್ಜಿ, ಶ್ರೀಲಂಕಾದ ವೇಗದ ಬೌಲರ್ ದಿಲ್ಶನ್ ಮಧುಶಂಕ ಹಾಗೂ ರಚಿನ್ ರವೀಂದ್ರ ರೇಸ್‌ನಲ್ಲಿದ್ದರು. ಆದರೆ, ಈ ಮೂವರನ್ನು ಹಿಂದಿಕ್ಕಿರುವ ರವೀಂದ್ರ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರವೀಂದ್ರ, ಇದು ನಿಸ್ಸಂಶಯವಾಗಿ ಬಹಳ ವಿಶೇಷವಾದ ಭಾವನೆಯಾಗಿದೆ. ನಿಮ್ಮ ಸಾಧನೆ ಫಲವಾಗಿ ಐಸಿಸಿಯಿಂದ ಈ ಪ್ರಶಸ್ತಿಗೆ ಆಯ್ಕೆಯಾಗುವುದು ಯಾವಾಗಲೂ ವಿಶೇಷವಾಗಿರುತ್ತದೆ. ಅಲ್ಲದೆ ಹಲವಾರು ದೇಶಗಳಲ್ಲಿ ಇಷ್ಟೊಂದು ಕ್ರಿಕೆಟ್ ಆಡುವ ಅವಕಾಶ ಸಿಕ್ಕಿದ್ದು ಕೂಡ ಬಹಳ ವಿಶೇಷವಾಗಿತ್ತು ಎಂದಿದ್ದಾರೆ.
ಇನ್ನು 2023 ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಯುವ ಆಟಗಾರನಾಗಿ ರಚಿನ್ ರವೀಂದ್ರ ತಮ್ಮ ಸಾಮರ್ಥ್ಯವನ್ನು ಸಾಭೀತುಪಡಿಸಿದ್ದರು. 2023 ರ ಮೊದಲು, ಅವರು ನ್ಯೂಜಿಲೆಂಡ್ ಪರ ಟಿ20 ಮತ್ತು ಏಕದಿನ ಪಂದ್ಯಗಳನ್ನು ಆಡಿದ್ದರು. ಕಳೆದ ಮಾರ್ಚ್ನಲ್ಲಿ ತಮ್ಮ ಏಕದಿನ ವೃತ್ತಿಜೀವನವನ್ನು ಪ್ರಾರಂಭಿಸಿದ ರವೀಂದ್ರ ಮೊದಲ ಪಂದ್ಯದಲ್ಲಿಯೇ ಶ್ರೀಲಂಕಾ ವಿರುದ್ಧ 49 ರನ್ಗಳ ಇನ್ನಿಂಗ್ಸ್ ಆಡಿದ್ದರು.
ನಂತರ ಪಾಕಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಬೌಲಿಂಗ್ನಲ್ಲಿ ತಮ್ಮ ಕರಾಮತ್ತು ತೋರಿದ್ದ ರವೀಂದ್ರ, ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್ನಲ್ಲಿ ಅಜೇಯ 123 ರನ್ಗಳ ಇನ್ನಿಂಗ್ಸ್ ಆಡಿದ್ದರು.
ಇನ್ನು ಏಕದಿನ ವಿಶ್ವಕಪ್‌ನಲ್ಲಿ ರನ್ ಶಿಖರ ಕಟ್ಟಿದ್ದ ರವೀಂದ್ರ ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಅರ್ಧಶತದ ಇನ್ನಿಂಗ್ಸ್ ಆಡಿದ್ದರು. ಅದಕ್ಕೂ ಮೊದಲು ನೆದರ್ಲ್ಯಾಂಡ್ಸ್ ವಿರುದ್ಧ 51 ರನ್ಗಳ ಇನ್ನಿಂಗ್ಸ್ ಹಾಗೂ ಇದೇ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ 116 ರನ್, ಬೆಂಗಳೂರಿನಲ್ಲಿ ಪಾಕಿಸ್ತಾನ ವಿರುದ್ಧ ಶತಕ ಕೂಡ ಬಾರಿಸಿದ್ದರು.
ಹೀಗಾಗಿ ರವೀಂದ್ರ ಇಡೀ ಪಂದ್ಯಾವಳಿಯಲ್ಲಿ 578 ರನ್ ಕಲೆಹಾಕುವ ಮೂಲಕ ಈ ಟೂರ್ನಿಯಲ್ಲಿ ನ್ಯೂಜಿಲೆಂಡ್ ಪರ ಅಧಿಕ ರನ್ ಕಲೆಹಾಕಿದ ಬ್ಯಾಟರ್ ಹಾಗೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕ್ವಿಂಟನ್ ಡಿ ಕಾಕ್ ನಂತರ ಟೂರ್ನಿಯಲ್ಲಿ ಅಧಿಕ ರನ್ ಬಾರಿಸಿದ ಆಟಗಾರ ಎನಿಸಿಕೊಂಡರು.
Published On - 5:41 pm, Wed, 24 January 24