ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾ ಸ್ಪಿನ್ನರ್ಸ್ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ 500+ ವಿಕೆಟ್ಗಳನನ್ನು ಕಬಳಿಸುವ ಮೂಲಕ ಎಂಬುದು ವಿಶೇಷ.
ಈ ಪಂದ್ಯದಲ್ಲಿ ಬೆನ್ ಡಕೆಟ್ (35) ರನ್ನು ಎಲ್ಬಿಡಬ್ಲ್ಯೂ ಮಾಡುವ ಮೂಲಕ ಅಶ್ವಿನ್ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟಿದ್ದರು. ಇದರ ಬೆನ್ನಲ್ಲೇ ರವೀಂದ್ರ ಜಡೇಜಾ ಒಲಿ ಪೋಪ್ (1) ವಿಕೆಟ್ ಕಬಳಿಸಿದರು. ಈ ಎರಡು ವಿಕೆಟ್ಗಳೊಂದಿಗೆ ಟೀಮ್ ಇಂಡಿಯಾ ಪರ ಅತ್ಯಧಿಕ ವಿಕೆಟ್ ಪಡೆದ ಜೋಡಿ ಎಂಬ ದಾಖಲೆ ಅಶ್ವಿನ್-ಜಡೇಜಾ ಪಾಲಾಯಿತು.
ಇದಕ್ಕೂ ಮುನ್ನ ಈ ದಾಖಲೆ ಅನಿಲ್ ಕುಂಬ್ಳೆ ಹಾಗೂ ಹರ್ಭಜನ್ ಸಿಂಗ್ ಹೆಸರಿನಲ್ಲಿತ್ತು. ಜೊತೆಯಾಗಿ 54 ಟೆಸ್ಟ್ ಪಂದ್ಯಗಳನ್ನಾಡಿದ್ದ ಕುಂಬ್ಳೆ-ಭಜ್ಜಿ ಜೋಡಿ ಒಟ್ಟು 501 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ರವಿ ಜೋಡಿ ಅಳಿಸಿಹಾಕಿದ್ದಾರೆ.
50 ಟೆಸ್ಟ್ ಪಂದ್ಯಗಳಲ್ಲಿ ಜೊತೆಯಾಗಿ ಬೌಲಿಂಗ್ ಮಾಡಿರುವ ಅಶ್ವಿನ್-ಜಡೇಜಾ ಜೋಡಿಯು ಇದೀಗ 502 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನ ಭಾರತದ ಅತ್ಯಂತ ಯಶಸ್ವಿ ಬೌಲಿಂಗ್ ಜೋಡಿ ಎನಿಸಿಕೊಂಡಿದ್ದಾರೆ.
ಇನ್ನು ಟೆಸ್ಟ್ ಕ್ರಿಕೆಟ್ನ ಅತ್ಯಂತ ಯಶಸ್ವಿ ಜೋಡಿ ಎಂಬ ವಿಶ್ವ ದಾಖಲೆ ಇರುವುದು ಇಂಗ್ಲೆಂಡ್ನ ಜೇಮ್ಸ್ ಅ್ಯಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಹೆಸರಿನಲ್ಲಿ. ಜೊತೆಯಾಗಿ 138 ಟೆಸ್ಟ್ ಪಂದ್ಯಗಳನ್ನಾಡಿರುವ ಜಿಮ್ಮಿ ಮತ್ತು ಬ್ರಾಡಿ ಒಟ್ಟು 1039 ವಿಕೆಟ್ಗಳನ್ನು ಕಬಳಿಸಿ ವರ್ಲ್ಡ್ ರೆಕಾರ್ಡ್ ನಿರ್ಮಿಸಿಟ್ಟಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡುತ್ತಿರುವ ಇಂಗ್ಲೆಂಡ್ ತಂಡವು 25 ಓವರ್ಗಳ ಮುಕ್ತಾಯದ ವೇಳೆ 3 ವಿಕೆಟ್ ಕಳೆದುಕೊಂಡು 99 ರನ್ ಕಲೆಹಾಕಿದೆ. ಟೀಮ್ ಇಂಡಿಯಾ ಪರ ರವಿಚಂದ್ರನ್ ಅಶ್ವಿನ್ 2 ವಿಕೆಟ್ ಕಬಳಿಸಿದರೆ, ರವೀಂದ್ರ ಜಡೇಜಾ 1 ವಿಕೆಟ್ ಪಡೆದಿದ್ದಾರೆ.
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ, ಬೆನ್ ಡಕೆಟ್, ಒಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಮಾರ್ಕ್ ವುಡ್, ಜ್ಯಾಕ್ ಲೀಚ್.
Published On - 11:28 am, Thu, 25 January 24