R Ashwin: ಸ್ಪಿನ್ ಮೋಡಿಗಾರ ಅಶ್ವಿನ್ ಮುಂದಿದೆ 4 ದಾಖಲೆಗಳು
India vs England 1st Test: ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಗುರುವಾರದಿಂದ ಶುರುವಾಗಲಿದೆ. ಈ ಸರಣಿಯ ಐದು ಪಂದ್ಯಗಳ ಮೂಲಕ 4 ವಿಶೇಷ ದಾಖಲೆಯ ಬರೆಯುವ ಹೊಸ್ತಿಲಲ್ಲಿದ್ದಾರೆ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್. ಈ ದಾಖಲೆಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ...
Updated on:Jan 24, 2024 | 3:29 PM

ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವಣ ಪ್ರತಿಷ್ಠಿತ ಟೆಸ್ಟ್ ಸರಣಿಯು ಗುರುವಾರದಿಂದ ಶುರುವಾಗಲಿದೆ. 5 ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್ಗೆ ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಪಂದ್ಯದಲ್ಲಿ ಸ್ಪಿನ್ ಮೋಡಿ ಮಾಡಿದರೆ ಟೀಮ್ ಇಂಡಿಯಾ ಆಟಗಾರ ರವಿಚಂದ್ರನ್ ಅಶ್ವಿನ್ (R Ashwin) ಹೆಸರಿಗೆ ಒಂದಷ್ಟು ದಾಖಲೆಗಳು ಸೇರ್ಪಡೆಯಾಗಲಿದೆ.

ಅಂದರೆ ರವಿಚಂದ್ರನ್ ಅಶ್ವಿನ್ ಹಲವು ದಾಖಲೆಗಳನ್ನು ಬರೆಯುವ ಹೊಸ್ತಿಲಲ್ಲಿದ್ದಾರೆ. ಆ ದಾಖಲೆ ಬರೆಯಲು ಅಶ್ವಿನ್ ಎಷ್ಟು ವಿಕೆಟ್ಗಳನ್ನು ಕಬಳಿಸಬೇಕು?, ಈ ಮೂಲಕ ಯಾರ ದಾಖಲೆ ಮುರಿಯಬಹುದು? ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

500 ವಿಕೆಟ್‌ಗಳ ದಾಖಲೆ: ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಪೂರೈಸಲು ಬೇಕಿರುವುದು ಕೇವಲ 10 ವಿಕೆಟ್ಗಳು ಮಾತ್ರ. 179 ಟೆಸ್ಟ್ ಇನಿಂಗ್ಸ್ಗಳಿಂದ 490 ವಿಕೆಟ್ ಪಡೆದಿರುವ ಅಶ್ವಿನ್ ಇಂಗ್ಲೆಂಡ್ ವಿರುದ್ಧ ಹತ್ತು ವಿಕೆಟ್ ಕಬಳಿಸಿದರೆ, ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಉರುಳಿಸಿದ 2ನೇ ಭಾರತೀಯ ಎನಿಸಿಕೊಳ್ಳಲಿದ್ದಾರೆ. ಈ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ (619) ಅಗ್ರಸ್ಥಾನದಲ್ಲಿದ್ದಾರೆ.

100 ವಿಕೆಟ್‌ಗಳ ಸಾಧನೆ: ಟೆಸ್ಟ್ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ವಿರುದ್ಧ ನೂರು ವಿಕೆಟ್ಗಳನ್ನು ಕಬಳಿಸಿದ ಮೊದಲ ಭಾರತೀಯ ಎನಿಸಿಕೊಳ್ಳಲು ರವಿಚಂದ್ರನ್ ಅಶ್ವಿನ್ 12 ವಿಕೆಟ್‌ಗಳ ಅಂತರದಲ್ಲಿದ್ದಾರೆ. ಹೀಗಾಗಿ ಐದು ಪಂದ್ಯಗಳ ಈ ಸರಣಿಯಲ್ಲಿ ರವಿ ಅಶ್ವಿನ್ ಕಡೆಯಿಂದ ಈ ವಿಶೇಷ ದಾಖಲೆಯನ್ನು ನಿರೀಕ್ಷಿಸಬಹುದು.

ದಾಖಲೆ ಮುರಿಯಲು 7 ವಿಕೆಟ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ದಾಖಲೆ ಬಿಎಸ್ ಚಂದ್ರಶೇಖರ್ ಹೆಸರಿನಲ್ಲಿದೆ. 38 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಚಂದ್ರಶೇಖರ್ 95 ವಿಕೆಟ್ಗಳನ್ನು ಕಬಳಿಸಿ ಈ ದಾಖಲೆ ಬರೆದಿದ್ದಾರೆ. ಇದೀಗ ಆಂಗ್ಲರ ವಿರುದ್ಧ 88 ವಿಕೆಟ್ಗಳನ್ನು ಕಬಳಿಸಿರುವ ಅಶ್ವಿನ್ಗೆ ಈ ದಾಖೆ ಮುರಿಯಲು ಕೇವಲ 7 ವಿಕೆಟ್‌ಗಳ ಅವಶ್ಯಕತೆಯಿದೆ.

5 ವಿಕೆಟ್‌ಗಳ ದಾಖಲೆ: ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಪರ ಅತ್ಯಧಿಕ ಬಾರಿ 5 ವಿಕೆಟ್ ಪಡೆದ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಸರಿಗಟ್ಟುವ ಅವಕಾಶ ಕೂಡ ಅಶ್ವಿನ್ ಮುಂದಿದೆ. ಅನಿಲ್ ಕುಂಬ್ಳೆ ಟೆಸ್ಟ್‌ನಲ್ಲಿ 35 ಐದು ವಿಕೆಟ್‌ಗಳ ಸಾಧನೆ ಮಾಡಿದ್ದರೆ, ಇದೀಗ 34 ಬಾರಿ ಐದು ವಿಕೆಟ್ಗಳನ್ನು ಕಬಳಿಸಿರುವ ಅಶ್ವಿನ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಎರಡು ಬಾರಿ 5 ವಿಕೆಟ್ ಕಬಳಿಸಿದ ರವಿಚಂದ್ರನ್ ಅಶ್ವಿನ್ ಹೆಸರಿಗೆ ಹೊಸ ದಾಖಲೆ ಸೇರ್ಪಡೆಯಾಗಲಿದೆ.
Published On - 3:29 pm, Wed, 24 January 24
