- Kannada News Photo gallery Cricket photos ICC World cup 2015 semi finalist teams will play champions trophy 2025 semis
ಮರುಕಳಿಸಿದ ಇತಿಹಾಸ… ಫೈನಲ್ನಲ್ಲಿ ಯಾರ ಮುಖಾಮುಖಿ?
Champions Trophy 2025: ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದ ಪಂದ್ಯ ಮುಗಿದು, ಇದೀಗ ನಾಕೌಟ್ ಹಂತದ ಮ್ಯಾಚ್ಗಳಿಗೆ ವೇದಿಕೆ ಸಿದ್ಧವಾಗಿದೆ. ಇಂದು (ಮಾ.4) ನಡೆಯಲಿರುವ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾದರೆ, ನಾಳೆ (ಮಾ.5) ಜರುಗಲಿರುವ ಮ್ಯಾಚ್ನಲ್ಲಿ ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ತಂಡಗಳು ಸೆಣಸಲಿದೆ.
Updated on: Mar 04, 2025 | 9:04 AM

ಚಾಂಪಿಯನ್ಸ್ ಟ್ರೋಫಿಯ ನಾಕೌಟ್ ಹಂತದ ಪಂದ್ಯಗಳಿಗೆ ಕ್ಷಣಗಣನೆ ಶುರುವಾಗಿದೆ. ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಇಂದು (ಮಾ.4) ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಮಾರ್ಚ್ 5 ರಂದು ಲಾಹೋರ್ನಲ್ಲಿ ಜರುಗಲಿರುವ ಎರಡನೇ ಸೆಮಿಫೈನಲ್ನಲ್ಲಿ ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾ ತಂಡಗಳು ಸೆಣಸಲಿದೆ.

ವಿಶೇಷ ಎಂದರೆ 2023 ರ ಏಕದಿನ ವಿಶ್ವಕಪ್ನಲ್ಲಿ ಸೆಮಿಫೈನಲ್ ಆಡಿದ್ದ ತಂಡಗಳೇ ಈ ಬಾರಿ ಕೂಡ ಸೆಮಿಫೈನಲ್ಗೇರಿದೆ. ಅದರಲ್ಲೂ 2015 ರ ಏಕದಿನ ವಿಶ್ವಕಪ್ನ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಿದ್ದ ತಂಡಗಳೇ ಈ ಬಾರಿ ಪರಸ್ಪರ ಸೆಣಸುತ್ತಿರುವುದು ಮತ್ತೊಂದು ವಿಶೇಷ.

2015 ರ ಏಕದಿನ ವಿಶ್ವಕಪ್ನಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ತಂಡ ಮುಖಾಮುಖಿಯಾಗಿತ್ತು. ಆಕ್ಲೆಂಡ್ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು 281 ರನ್ ಕಲೆಹಾಕಿತ್ತು. ಮಳೆಯ ಕಾರಣ 43 ಓವರ್ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ನ್ಯೂಝಿಲೆಂಡ್ಗೆ 298 ರನ್ಗಳ ಗುರಿ ನೀಡಲಾಯಿತು. ಅದರಂತೆ ಕಿವೀಸ್ ಪಡೆ 42.5 ಓವರ್ಗಳಲ್ಲಿ 299 ರನ್ ಬಾರಿಸಿ 4 ವಿಕೆಟ್ಗಳ ಜಯ ಸಾಧಿಸಿತ್ತು. ಇದೀಗ ಮತ್ತೆ ಸೆಮಿಫೈನಲ್ನಲ್ಲಿ ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ಮುಖಾಮುಖಿಯಾಗಲು ಸಜ್ಜಾಗಿದೆ.

ಇನ್ನು ದ್ವಿತೀಯ ಸೆಮಿಫೈನಲ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಸಿಡ್ನಿಯಲ್ಲಿ ನಡೆದ ಈ ಮ್ಯಾಚ್ನಲ್ಲಿ ಮೊದಲ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 328 ರನ್ ಕಲೆಹಾಕಿದರೆ, ಟೀಮ್ ಇಂಡಿಯಾ 233 ರನ್ಗಳಿಗೆ ಆಲೌಟ್ ಆಗಿ 95 ರನ್ಗಳಿಂದ ಸೋಲೊಪ್ಪಿಕೊಂಡಿತು. ಇದೀಗ ಇದೇ ನಾಲ್ಕು ತಂಡಗಳು 10 ವರ್ಷಗಳ ಬಳಿಕ ಐಸಿಸಿ ಟೂರ್ನಿಯ ನಾಕೌಟ್ ಹಂತದಲ್ಲಿ ಮುಖಾಮುಖಿಯಾಗುತ್ತಿದೆ.

ಅಂದರೆ 2015ರ ವಿಶ್ವಕಪ್ನಿಂದ ಹೊರದಬ್ಬಿದ ತಂಡಗಳನ್ನು ಸೋಲಿಸಿ ಸೇಡು ತೀರಿಸಿಕೊಳ್ಳುವ ಉತ್ತಮ ಅವಕಾಶ ಸೌತ್ ಆಫ್ರಿಕಾ ಮತ್ತು ಭಾರತ ತಂಡಗಳ ಮುಂದಿದೆ. ಅದರಂತೆ ಟೀಮ್ ಇಂಡಿಯಾ ಹಾಗೂ ಸೌತ್ ಆಫ್ರಿಕಾ 10 ವರ್ಷಗಳ ಹಿಂದಿನ ಲೆಕ್ಕವನ್ನು ಚುಕ್ತಾ ಮಾಡಲಿದ್ದಾರಾ ಕಾದು ನೋಡಬೇಕಿದೆ.
