ಭಾರತ ಕ್ರಿಕೆಟ್ ತಂಡಕ್ಕೆ ಇಂದು ಎಂದೂ ಮರೆಯಲಾಗದ ದಿನ. ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ನ್ಯೂಜಿಲೆಂಡ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆದ್ದ ಮೊದಲ ತಂಡವಾಗಿ ಹೊರಹೊಮ್ಮಿತು. ಅದು ಭಾರತದ ವಿರುದ್ಧ. ರೋಚಕತೆಯಿಂದ ಕೂಡಿದ್ದ ಫೈನಲ್ ಕಾದಾಟದಲ್ಲಿ ಕೇನ್ ಪಡೆ ಭಾರತವನ್ನು ಸೋಲಿಸುವ ಮೂಲಕ ದೇಶದ ಕೋಟ್ಯಂತರ ಅಭಿಮಾನಿಗಳಿಗೆ ಆಘಾತ ನೀಡಿದರು.
2020 ರಿಂದ ಆರಂಭವಾದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಹಲವು ಏರಿಳಿತಗಳನ್ನು ಕಂಡ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಅಂತಿಮವಾಗಿ ಫೈನಲ್ಗೆ ತಲುಪಿದವು. ಉಭಯ ತಂಡಗಳ ನಡುವಿನ ಈ ಪಂದ್ಯ ಸೌತಾಂಪ್ಟನ್ ನಲ್ಲಿ ನಡೆಯಿತು. ಟೀಮ್ ಇಂಡಿಯಾದ ನಾಯಕತ್ವ ವಿರಾಟ್ ಕೊಹ್ಲಿ ವಹಿಸಿದ್ದರೆ, ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ನಾಯಕತ್ವವನ್ನು ನಿಭಾಯಿಸಿದ್ದರು.
ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 217 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಭಾರತ ಪರ ಅಜಿಂಕ್ಯ ರಹಾನೆ ಗರಿಷ್ಠ 49 ರನ್ ಗಳಿಸಿದ್ದರು. ಇದಕ್ಕೆ ಉತ್ತರವಾಗಿ ಕಿವೀಸ್ ತಂಡ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 249 ರನ್ ಗಳಿಸಿತ್ತು.
ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ನ್ಯೂಜಿಲೆಂಡ್ಗೆ ಗೆಲ್ಲಲು 139 ರನ್ಗಳ ಗುರಿಯನ್ನು ನೀಡಿತ್ತು, ಇದು ಕಿವೀಸ್ ತಂಡಕ್ಕೆ ಸವಾಲಾಗಿ ಪರಿಣಮಿಸಲಿಲ್ಲ. ಎರಡು ವಿಕೆಟ್ಗಳನ್ನು ಕಳೆದುಕೊಂಡ ಕೇನ್ ಪಡೆ ಸುಲಭವಾಗಿ ಗೆಲುವು ಸಾಧಿಸಿತು. ನ್ಯೂಜಿಲೆಂಡ್ ಪರ ನಾಯಕ ಕೇನ್ ವಿಲಿಯಮ್ಸನ್ 89 ಎಸೆತಗಳಲ್ಲಿ ಎಂಟು ಬೌಂಡರಿಗಳ ನೆರವಿನಿಂದ ಅಜೇಯ 52 ರನ್ ಗಳಿಸಿದರು. ರಾಸ್ ಟೇಲರ್ 100 ಎಸೆತಗಳಲ್ಲಿ ಆರು ಬೌಂಡರಿಗಳೊಂದಿಗೆ ಅಜೇಯ 47 ರನ್ ಗಳಿಸಿದರು.
ಈ ಮೂಲಕ ಸುಮಾರು 21 ವರ್ಷಗಳ ನಂತರ ನ್ಯೂಜಿಲೆಂಡ್ ಮತ್ತೊಮ್ಮೆ ಐಸಿಸಿ ಟೂರ್ನಿಯನ್ನು ಗೆದ್ದುಕೊಂಡಿತು. ಇದಕ್ಕೂ ಮುನ್ನ 2000 ದಲ್ಲಿ ನ್ಯೂಜಿಲೆಂಡ್ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದ್ದರು. ಆಗಲೂ ಅವರು ಫೈನಲ್ ನಲ್ಲಿಯೇ ಭಾರತವನ್ನು ಸೋಲಿಸಿದ್ದರು.
Published On - 8:42 am, Thu, 23 June 22