Updated on:Jan 24, 2023 | 5:42 PM
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಇಂದೋರ್ ಮೈದಾನದಲ್ಲಿ ಮತ್ತೊಮ್ಮೆ ತಮ್ಮ ಕೈಚಳಕ ತೋರಿದ್ದಾರೆ. ಈ ಹಿಂದೆ ಇದೇ ಮೈದಾನದಲ್ಲಿ ಟಿ20 ಶತಕ ಸಿಡಿಸಿದ ರೋಹಿತ್, ಮತ್ತೆ ಇದೇ ಮೈದಾನದಲ್ಲಿ ಏಕದಿನ ಶತಕ ಸಿಡಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ರೋಹಿತ್ ಈ ಸಾಧನೆ ಮಾಡಿದ್ದು, ಇದರೊಂದಿಗೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಇದು ಏಕದಿನದಲ್ಲಿ ರೋಹಿತ್ ಅವರ 30ನೇ ಶತಕವಾಗಿದ್ದು, ಇದರೊಂದಿಗೆ ಅವರು 50 ಓವರ್‌ಗಳ ಮಾದರಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದು, ಈ ವಿಚಾರದಲ್ಲಿ ರಿಕಿ ಪಾಂಟಿಂಗ್ ಅವರನ್ನು ಸರಿಗಟ್ಟಿದ್ದಾರೆ. ಪಾಂಟಿಂಗ್ ಕೂಡ ಏಕದಿನ ಮಾದರಿಯಲ್ಲಿ 30 ಶತಕಗಳನ್ನು ಸಿಡಿಸಿದ್ದರು.
ಭಾರತದ ಸಚಿನ್ ತೆಂಡೂಲ್ಕರ್ 49 ಶತಕಗಳೊಂದಿಗೆ ಏಕದಿನದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ. ಸಚಿನ್ ನಂತರ ವಿರಾಟ್ ಕೊಹ್ಲಿ ಇದ್ದಾರೆ. ಇವರಿಬ್ಬರ ನಂತರ ರೋಹಿತ್ ಶರ್ಮಾ ಇದ್ದರೆ, ಪಾಂಟಿಂಗ್ 4ನೇ ಸ್ಥಾನದಲ್ಲಿದ್ದಾರೆ.
ಮೂರು ವರ್ಷಗಳ ನಂತರ ಏಕದಿನದಲ್ಲಿ ರೋಹಿತ್ ಗಳಿಸಿದ ಮೊದಲ ಶತಕ ಇದಾಗಿದೆ. ಇದಕ್ಕೂ ಮೊದಲು, ಅವರು 19 ಜನವರಿ 2020 ರಂದು ಆಸ್ಟ್ರೇಲಿಯಾ ವಿರುದ್ಧ ಶತಕ ಗಳಿಸಿದರು. ಈ ಶತಕದೊಂದಿಗೆ, ರೋಹಿತ್ ಶ್ರೀಲಂಕಾದ ಮಾಜಿ ಆರಂಭಿಕ ಆಟಗಾರ ಸನತ್ ಜಯಸೂರ್ಯ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಜಯಸೂರ್ಯ ಆರಂಭಿಕರಾಗಿ ಏಕದಿನದಲ್ಲಿ 28 ಶತಕಗಳನ್ನು ಬಾರಿಸಿದ್ದು, ರೋಹಿತ್ ಶರ್ಮಾ ಕೂಡ ಆರಂಭಿಕನಾಗಿ 28ನೇ ಏಕದಿನ ಶತಕ ಸಿಡಿಸಿದ್ದಾರೆ.
ಆದರೆ ಈ ಪಂದ್ಯದಲ್ಲಿ ಶತಕ ಸಿಡಿಸಿದ ರೋಹಿತ್, ಶತಕದ ಬೆನ್ನಲ್ಲೆ ತಮ್ಮ ವಿಕೆಟ್ ಒಪ್ಪಿಸಿದರು. ತಮ್ಮ ಇನ್ನಿಂಗ್ಸ್ನಲ್ಲಿ 85 ಎಸೆತಗಳನ್ನು ಎದುರಿಸಿದ ರೋಹಿತ್, ಒಂಬತ್ತು ಬೌಂಡರಿ ಮತ್ತು ಆರು ಸಿಕ್ಸರ್‌ಗಳ ಸಹಿತ 101 ರನ್ ಕಲೆಹಾಕಿದರು.
Published On - 5:42 pm, Tue, 24 January 23