Updated on:Oct 03, 2022 | 7:07 PM
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿ ಇನ್ನೂ ಪೂರ್ಣಗೊಂಡಿಲ್ಲ, ಆದರೆ ಶೀಘ್ರದಲ್ಲೇ ಪ್ರಾರಂಭವಾಗುವ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಶಿಖರ್ ಧವನ್ ಅವರ ನಾಯಕತ್ವದಲ್ಲಿ ಮೂರು ಪಂದ್ಯಗಳ ಸರಣಿಗೆ ತಂಡವನ್ನು ಭಾನುವಾರ ಘೋಷಿಸಿತು, ಇದರಲ್ಲಿ 2 ಆಟಗಾರರು ಮೊದಲ ಬಾರಿಗೆ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ರಜತ್ ಪಾಟಿದಾರ್: ಮಧ್ಯಪ್ರದೇಶದ ಈ ಬ್ಯಾಟ್ಸ್‌ಮನ್ ಈ ವರ್ಷ ಅದ್ಭುತ ಪ್ರದರ್ಶನ ನೀಡಿದ್ದಾರೆ. ರಣಜಿ ಟ್ರೋಫಿಯ ಫೈನಲ್‌ನಲ್ಲಿ ಶತಕ ಸೇರಿದಂತೆ ಈ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಒಬ್ಬರಾಗಿದ್ದರು. ಇದರೊಂದಿಗೆ, ಐಪಿಎಲ್‌ನಲ್ಲಿ ಆರ್ಸಿಬಿ ಪರ ಕೆಲವು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಕೂಡ ಆಡಿದ್ದರು. ಪಾಟಿದಾರ್ ಇದುವರೆಗೆ 45 ಲಿಸ್ಟ್ A (ODI) ಪಂದ್ಯಗಳನ್ನು ಆಡಿದ್ದು, ಸುಮಾರು 35 ರ ಸರಾಸರಿಯಲ್ಲಿ 1462 ರನ್ ಗಳಿಸಿದ್ದಾರೆ ಮತ್ತು 3 ಶತಕಗಳನ್ನು ಬಾರಿಸಿದ್ದಾರೆ.
ಮುಖೇಶ್ ಕುಮಾರ್: ಬಂಗಾಳದ ಈ ವೇಗದ ಬೌಲರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸತತವಾಗಿ ಪ್ರಭಾವ ಬೀರಿದ್ದಾರೆ. ರಣಜಿ ಟ್ರೋಫಿಯಲ್ಲಿ ಬಂಗಾಳದ ಅತ್ಯಂತ ಯಶಸ್ವಿ ಬೌಲರ್ ಆಗಿದ್ದ ಮುಖೇಶ್, ಇತ್ತೀಚೆಗೆ ನ್ಯೂಜಿಲೆಂಡ್ ಎ ವಿರುದ್ಧದ ಮೂರು ಟೆಸ್ಟ್‌ಗಳಲ್ಲಿಯೂ ಉತ್ತಮ ಯಶಸ್ಸನ್ನು ಗಳಿಸಿದ್ದರು. 18 ಲಿಸ್ಟ್ ಎ ಪಂದ್ಯಗಳಲ್ಲಿ 17 ವಿಕೆಟ್ ಪಡೆದಿರುವ ಮುಖೇಶ್, ಸದ್ಯ ಇರಾನಿ ಕಪ್‌ನಲ್ಲಿ ಅದ್ಭುತ ಫಾರ್ಮ್ ತೊರಿಸಿದ್ದಾರೆ.
ಇವರಲ್ಲದೆ ಶಹಬಾಜ್ ಅಹ್ಮದ್ ಮತ್ತು ರಾಹುಲ್ ತ್ರಿಪಾಠಿ ಅವರಂತಹ ಆಟಗಾರರೂ ಈ ಸರಣಿಗೆ ಆಯ್ಕೆಯಾಗಿದ್ದಾರೆ. ಈ ಇಬ್ಬರೂ ಆಟಗಾರರು ಇತ್ತೀಚೆಗೆ ಜಿಂಬಾಬ್ವೆ ಪ್ರವಾಸದಲ್ಲಿ ತಂಡದೊಂದಿಗೆ ಇದ್ದರು, ಆದರೆ ಅವರಿಗೆ ಚೊಚ್ಚಲ ಅವಕಾಶ ಸಿಗಲಿಲ್ಲ.
ಭಾರತ ತಂಡ: ಶಿಖರ್ ಧವನ್ (ನಾಯಕ), ಶ್ರೇಯಸ್ ಅಯ್ಯರ್ (ಉಪನಾಯಕ), ರಿತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಮುಖೇಶ್ ಕುಮಾರ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್.
Published On - 7:07 pm, Mon, 3 October 22