ಭಾರತ-ಸೌತ್ ಆಫ್ರಿಕಾ ನಡುವಣ 2ನೇ ಟಿ20 ಪಂದ್ಯವು ರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಟೀಮ್ ಇಂಡಿಯಾ ನೀಡಿದ 238 ರನ್ಗಳ ಟಾರ್ಗೆಟ್ ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 221 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಟೀಮ್ ಇಂಡಿಯಾ 16 ರನ್ಗಳಿಂದ ರೋಚಕ ಜಯ ಸಾಧಿಸಿತು.
ಅಂದರೆ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಮೂಡಿಬಂದ ಒಟ್ಟಾರೆ ಸ್ಕೋರ್ 458 ರನ್‌ಗಳು. ಅದರಲ್ಲಿ ಡೆತ್ ಓವರ್ಗಳಲ್ಲಿ ಬರೋಬ್ಬರಿ 160 ರನ್ಗಳನ್ನು ಬಾರಿಸಿರುವುದು ವಿಶೇಷ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ (57), ಸೂರ್ಯಕುಮಾರ್ ಯಾದವ್ (61) ಹಾಗೂ ವಿರಾಟ್ ಕೊಹ್ಲಿ (49) ಕೊಹ್ಲಿ ಅಬ್ಬರಿಸಿದರು. ಪರಿಣಾಮ 15 ಓವರ್ ವೇಳೆಗೆ ಟೀಮ್ ಇಂಡಿಯಾ ಮೊತ್ತ 150 ರ ಗಡಿದಾಟಿತು. ಇನ್ನು ಕೊನೆಯ ಐದು ಓವರ್ಗಳಲ್ಲಿ ಟೀಮ್ ಇಂಡಿಯಾ ಕಲೆಹಾಕಿದ್ದು ಬರೋಬ್ಬರಿ 82 ರನ್‌ಗಳು.
ಇತ್ತ 238 ರನ್ಗಳನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ ಕೂಡ 15 ಓವರ್ಗಳಲ್ಲಿ ತಮ್ಮ ಸ್ಕೋರ್ ಅನ್ನು 150 ರ ಗಡಿದಾಟಿಸಿದ್ದರು. ಅಲ್ಲದೆ ಕೊನೆಯ ಐದು ಓವರ್ಗಳಲ್ಲಿ ಬರೋಬ್ಬರಿ 78 ರನ್ ಸಿಡಿಸುವ ಮೂಲಕ ಪಂದ್ಯ ಗೆಲ್ಲುವ ಪ್ರಯತ್ನ ಮಾಡಿದ್ದರು. ಅಂದರೆ ಎರಡೂ ತಂಡಗಳು ಡೆತ್ ಓವರ್ಗಳಲ್ಲಿ (5+5) ಕಲೆಹಾಕಿರುವುದು ಬರೋಬ್ಬರಿ 160 ರನ್‌ಗಳು. ಇದು ಟಿ20 ಕ್ರಿಕೆಟ್ನಲ್ಲಿ ಹೊಸ ದಾಖಲೆಯಾಗಿದೆ.
ಅಂದರೆ ಟಿ20 ಕ್ರಿಕೆಟ್ನ ಒಂದು ಪಂದ್ಯದ ಡೆತ್ ಓವರ್ಗಳಲ್ಲಿ ಮೂಡಿಬಂದ ಅತ್ಯಧಿಕ ಸ್ಕೋರ್ ಇದಾಗಿದೆ. ಇದಕ್ಕೂ ಮುನ್ನ 2010 ರಲ್ಲಿ ಪಾಕಿಸ್ತಾನ್ (73 ರನ್) ಹಾಗೂ ಆಸ್ಟ್ರೇಲಿಯಾ (75 ರನ್) ಡೆತ್ ಓವರ್ಗಳಲ್ಲಿ 148 ರನ್ ಕಲೆಹಾಕಿದ್ದು ಇದುವರೆಗಿನ ವಿಶ್ವ ದಾಖಲೆಯಾಗಿತ್ತು.
ಇದೀಗ ಭಾರತ - ಸೌತ್ ಆಫ್ರಿಕಾ ಬ್ಯಾಟ್ಸ್ಮನ್ಗಳು ಡೆತ್ ಓವರ್ಗಳಲ್ಲಿ 160 ರನ್ ಬಾರಿಸುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ಈ ಮೂಲಕ ದಶಕಗಳ ಹಿಂದೆ ಪಾಕ್-ಆಸ್ಟ್ರೇಲಿಯಾ ನಿರ್ಮಿಸಿದ ವಿಶ್ವ ದಾಖಲೆಯನ್ನು ಭಾರತ-ಸೌತ್ ಆಫ್ರಿಕಾ ತಂಡಗಳ ಬ್ಯಾಟ್ಸ್ಮನ್ಗಳು ಅಳಿಸಿಹಾಕಿದ್ದಾರೆ.
Published On - 1:25 pm, Mon, 3 October 22