Updated on: Jan 14, 2023 | 10:56 PM
ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್-19 ಮಹಿಳಾ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆಟಗಾರ್ತಿ ಶಫಾಲಿ ವರ್ಮಾ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಹೊಸ ದಾಖಲೆ ಬರೆದಿದ್ದಾರೆ. ಬೆನೊನಿಯಲ್ಲಿ ನಡೆದ 3ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾಗೂ ಭಾರತ ತಂಡ ಮುಖಾಮುಖಿಯಾಗಿತ್ತು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ಅಂಡರ್ 19 ಮಹಿಳಾ ತಂಡದ ನಾಯಕಿ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತರುಣಿಯರು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 166 ರನ್ ಕಲೆಹಾಕಿತು.
167 ರನ್ಗಳ ಟಾರ್ಗೆಟ್ ಪಡೆದ ಟೀಮ್ ಇಂಡಿಯಾ ಪರ ಶಫಾಲಿ ವರ್ಮಾ ಹಾಗೂ ಶ್ವೇತಾ ಸೆಹ್ರಾವತ್ ಆರಂಭಿಕರಾಗಿ ಕಣಕ್ಕಿಳಿದರು. ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ಗೆ ಒತ್ತು ನೀಡಿದ ಈ ಜೋಡಿ 7 ಓವರ್ಗಳಲ್ಲಿ 77 ರನ್ ಚಚ್ಚಿದ್ದರು.
ಅದರಲ್ಲೂ ನ್ತಾಬಿಸೆಂಗ್ ನೀನಿ ಎಸೆದ ಪಂದ್ಯದ 6ನೇ ಓವರ್ನಲ್ಲಿ ಅಬ್ಬರಿಸಿದ ಮೊದಲ 5 ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ 5 ಫೋರ್ಗಳನ್ನು ಬಾರಿಸಿದರು. ಇನ್ನು 6ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಒಟ್ಟು 26 ರನ್ ಕಲೆಹಾಕಿದರು. ಈ ಮೂಲಕ ಮಹಿಳಾ ಅಂಡರ್-19 ಪಂದ್ಯದಲ್ಲಿ ಒಂದೇ ಓವರ್ನ ಎಲ್ಲಾ ಎಸೆತಗಳಲ್ಲಿ ಬೌಂಡರಿ ಬಾರಿಸಿದ ಮೊದಲ ಆಟಗಾರ್ತಿ ಎಂಬ ವಿಶ್ವ ದಾಖಲೆಯನ್ನು ಶಫಾಲಿ ವರ್ಮಾ ತಮ್ಮದಾಗಿಸಿಕೊಂಡರು.
ಇನ್ನು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಶಫಾಲಿ ಕೇವಲ 16 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 9 ಫೋರ್ನೊಂದಿಗೆ 45 ರನ್ಗಳಿಸಿ ಔಟಾದರು. ಇದರ ಬೆನ್ನಲ್ಲೇ ಅಬ್ಬರ ಶುರು ಮಾಡಿದ ಶ್ವೇತಾ ಶೆಹರಾವತ್ 57 ಎಸೆತಗಳಲ್ಲಿ 20 ಫೋರ್ನೊಂದಿಗೆ ಅಜೇಯ 92 ರನ್ ಚಚ್ಚಿದರು.
ಅದರಂತೆ ಟೀಮ್ ಇಂಡಿಯಾ ಅಂಡರ್-19 ಯುವತಿಯರು 16.3 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 170 ರನ್ ಬಾರಿಸಿ ಭರ್ಜರಿ ಗೆಲುವು ದಾಖಲಿಸಿತು. ಈ ಜಯದೊಂದಿಗೆ ಅಂಡರ್-19 ಮಹಿಳಾ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ.