- TV9 Kannada Photo gallery Cricket photos Women's Test: India Sets 457 Target as England's tammy beaumont and Heather Knight Bid Farewell
IND vs ENG: ವೃತ್ತಿಜೀವನದ ಕೊನೆಯ ಇನ್ನಿಂಗ್ಸ್‌ನಲ್ಲಿ ಗೋಲ್ಡನ್ ಡಕ್ ಆದ ಟ್ಯಾಮಿ ಬ್ಯೂಮಾಂಟ್
tammy beaumont and Heather Knight Bid Farewell: ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಮಹಿಳಾ ಐತಿಹಾಸಿಕ ಟೆಸ್ಟ್‌ನಲ್ಲಿ ಭಾರತ ಮೇಲುಗೈ ಸಾಧಿಸಿದೆ. ಇಂಗ್ಲೆಂಡ್‌ಗೆ 457 ರನ್‌ಗಳ ಬೃಹತ್ ಗುರಿ ನೀಡಿದ್ದು, ಇಂಗ್ಲೆಂಡ್ ಬ್ಯಾಟಿಂಗ್ ಕುಸಿತ ಕಂಡಿದೆ. ಈ ಪಂದ್ಯ ಇಂಗ್ಲೆಂಡ್‌ನ ದಿಗ್ಗಜ ಆಟಗಾರ್ತಿಯರಾದ ಟ್ಯಾಮಿ ಬ್ಯೂಮಾಂಟ್ ಹಾಗೂ ಹೀದರ್ ನೈಟ್ ಅವರ ವೃತ್ತಿಜೀವನದ ಕೊನೆಯ ಪಂದ್ಯವಾಗಿದೆ. ಆದರೆ ಇವರಿಬ್ಬರೂ ತಮ್ಮ ಕೊನೆಯ ಇನ್ನಿಂಗ್ಸ್‌ಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
Updated on: Jul 12, 2026 | 11:01 PM

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ದಿನದಿಂದಲೂ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಇಂಗ್ಲೆಂಡ್ ಗೆಲುವಿಗೆ ಟೀಂ ಇಂಡಿಯಾ 457 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಮತ್ತೊಮ್ಮೆ ಬ್ಯಾಟಿಂಗ್ ವಿಭಾಗ ಕೈಕೊಟ್ಟಿದೆ.

ಅಂದಹಾಗೆ ಈ ಟೆಸ್ಟ್ ಪಂದ್ಯದ ಅಂತ್ಯದೊಂದಿಗೆ ಇಂಗ್ಲೆಂಡ್ ತಂಡದ ಇಬ್ಬರು ಲೆಜೆಂಡರಿ ಆಟಗಾರರ್ತಿಯರ ವೃತ್ತಿಜೀವನವೂ ಅಂತ್ಯವಾಗಲಿದೆ. ಇಂಗ್ಲೆಂಡ್ ತಂಡದ ಇಬ್ಬರು ದಿಗ್ಗಜ ಆಟಗಾರ್ತಿಯರಾದ ಟ್ಯಾಮಿ ಬ್ಯೂಮಾಂಟ್ ಹಾಗೂ ತಂಡದ ಮಾಜಿ ನಾಯಕಿ ಹೀದರ್ ನೈಟ್, ಭಾರತದ ವಿರುದ್ಧದ ಈ ಪಂದ್ಯವೇ ನಮ್ಮ ವೃತ್ತಿಜೀವನದ ಕೊನೆಯ ಪಂದ್ಯ ಎಂದು ಈ ಮೊದಲೇ ಹೇಳಿದ್ದರು.

ಹೀಗಾಗಿ ಇಬ್ಬರು ದಿಗ್ಗಜ ಆಟಗಾರ್ತಿಯರ ಆಟವನ್ನು ಕೊನೆಯದಾಗಿ ಕಣ್ತುಂಬಿಕೊಳ್ಳಲು ಸಾಕಷ್ಟು ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮನಿಸಿದ್ದರು. ಆದರೆ ಈ ಪಂದ್ಯದ ಎರಡೂ ಇನ್ನಿಂಗ್ಸ್ಗಳಲ್ಲೂ ಇವರಿಬ್ಬರಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಬ್ಯೂಮಾಂಟ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 2 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ಹೀದರ್ ನೈಟ್ 6 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದ್ದರು.

ಇದೀಗ ಎರಡನೇ ಇನ್ನಿಂಗ್ಸ್‌ನಲ್ಲಿ ಇವರಿಬ್ಬರಿಂದ ಒಂದೊಳ್ಳೆ ಇನ್ನಿಂಗ್ಸ್ನ ನಿರೀಕ್ಷೆ ಇತ್ತು. ಆದರೆ ಭಾರತ ನೀಡಿದ 457 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ಗೆ ಆರಂಭದಲ್ಲೇ ಆಘಾತ ಎದುರಾಯಿತು. ಆರಂಭಿಕ ಆಟಗಾರ್ತಿ ಟ್ಯಾಮಿ ಬ್ಯೂಮಾಂಟ್ ಎರಡನೇ ಓವರ್‌ನ ಮೊದಲ ಎಸೆತದಲ್ಲಿಯೇ ಔಟಾದರು. ಕ್ರಾಂತಿ ಗೌಡ್ ಎಸೆದ ಎರಡನೇ ಓವರ್‌ನ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು. ಅಂದರೆ ಬ್ಯೂಮಾಂಟ್ ತಮ್ಮ ವೃತ್ತಿಜೀವನದ ಕೊನೆಯ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯದೆಯೇ ಗೋಲ್ಡನ್ ಡಕ್‌ಗೆ ಔಟಾದರು.

ಟ್ಯಾಮಿ ಬ್ಯೂಮಾಂಟ್ ಇಂಗ್ಲೆಂಡ್ ಪರ 12 ಟೆಸ್ಟ್, 140 ಏಕದಿನ ಮತ್ತು 109 ಟಿ20ಪಂದ್ಯಗಳನ್ನು ಆಡಿದ್ದರು. ಇದೀಗ ಅವರ ವರ್ಣರಂಜಿತ ವೃತ್ತಿಜೀವನ ಅಂತ್ಯವಾಗಿದೆ. ಬ್ಯೂಮಾಂಟ್ ಜೊತೆಗೆ ಹೀದರ್ ನೈಟ್ ಕೂಡ ಕ್ರಾಂತಿ ಗೌಡ್ಗೆ ಬಲಿಯಾದರು. ಅವರು ತಮ್ಮ ವೃತ್ತಿಜೀವನದ ಕೊನೆಯ ಇನ್ನಿಂಗ್ಸ್‌ನಲ್ಲಿ ಕೇವಲ 13 ರನ್‌ಗಳಿಸಲಷ್ಟೇ ಶಕ್ತರಾದರು. ಹೀದರ್ ಇಂಗ್ಲೆಂಡ್ ಪರ 160 ಏಕದಿನ ಪಂದ್ಯಗಳು, 15 ಟೆಸ್ಟ್‌ಗಳು ಮತ್ತು 145 ಟಿ20 ಪಂದ್ಯಗಳನ್ನು ಆಡಿದ್ದರು.




