Updated on: Oct 04, 2022 | 4:00 PM
ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾದಿಂದ ಇಬ್ಬರು ಸ್ಟಾರ್ ಆಟಗಾರರು ಹೊರಗುಳಿದಿದ್ದಾರೆ. ಮೊದಲಿಗೆ ಮೊಣಕಾಲಿನ ಗಾಯದ ಕಾರಣ ರವೀಂದ್ರ ಜಡೇಜಾ ಅವರ ತಂಡದಿಂದ ಹೊರಗುಳಿದಿದ್ದರು. ಇದೀಗ ಬೆನ್ನು ನೋವಿನ ಕಾರಣ ಜಸ್ಪ್ರೀತ್ ಬುಮ್ರಾ ಸಹ ತಂಡದಿಂದ ಹೊರಬಿದ್ದಿದ್ದಾರೆ.
ಟಿ20 ವಿಶ್ವಕಪ್ ಆರಂಭಕ್ಕೆ ದಿನಗಳು ಮಾತ್ರ ಉಳಿದಿದ್ದು, ಹೀಗಾಗಿ ಶೀಘ್ರದಲ್ಲೇ ಬದಲಿ ವೇಗಿಯನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಸದ್ಯ ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಮುಂದೆ ಐವರು ವೇಗಿಗಳ ಆಯ್ಕೆಯಿದೆ. ಇವರಲ್ಲಿ ಯಾರಿಗೆ ಮಣೆಹಾಕಲಿದ್ದಾರೆ ಎಂಬುದೇ ಕುತೂಹಲ. ಆ ವೇಗಿಗಳು ಯಾರೆಂದರೆ...
ಮೊಹಮ್ಮದ್ ಶಮಿ: ಜಸ್ಪ್ರೀತ್ ಬುಮ್ರಾ ಸ್ಥಾನಕ್ಕೆ ಕೇಳಿ ಬರುತ್ತಿರುವ ಮೊದಲ ಹೆಸರೆಂದರೆ ಮೊಹಮ್ಮದ್ ಶಮಿ. ಏಕೆಂದರೆ ಟಿ20 ವಿಶ್ವಕಪ್ಗೆ ಆಯ್ಕೆಯಾದ ಮೀಸಲು ಆಟಗಾರರ ಪಟ್ಟಿಯಲ್ಲಿ ಶಮಿ ಹೆಸರಿಸಿದೆ. ಅಷ್ಟೇ ಅಲ್ಲದೆ ಐಪಿಎಲ್ 2021 ರಲ್ಲಿ ಶಮಿ 20 ವಿಕೆಟ್ ಉರುಳಿಸಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದರು. ಅಲ್ಲದೆ ಅನುಭವಿ ವೇಗಿಯಾಗಿರುವ ಕಾರಣ ಅವರೇ ಸೂಕ್ತ ಆಯ್ಕೆ ಎನ್ನಲಾಗುತ್ತಿದೆ. ಆದರೆ ಕಳೆದ ಟಿ20 ವಿಶ್ವಕಪ್ ಬಳಿಕ ಶಮಿ ಭಾರತದ ಪರ ಒಂದೇ ಒಂದು ಟಿ20 ಪಂದ್ಯವಾಡಿಲ್ಲ. ಇದಾಗ್ಯೂ ಅನುಭವಕ್ಕೆ ಮಣೆಹಾಕುವುದಾದರೆ ಶಮಿಯನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.
ದೀಪಕ್ ಚಹರ್: ಟೀಮ್ ಇಂಡಿಯಾದ ಯುವ ವೇಗಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಚಹರ್ ಕೂಡ ಟಿ20 ವಿಶ್ವಕಪ್ಗಾಗಿ ಆಯ್ಕೆಯಾದ ಮೀಸಲು ಆಟಗಾರರ ಪಟ್ಟಿಯಲ್ಲಿರುವ ವೇಗಿ. ಹಾಗೆಯೇ ಪ್ರಸ್ತುತ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲೂ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಬುಮ್ರಾ ಸ್ಥಾನದಲ್ಲಿ ಚಹರ್ ಅವಕಾಶ ಪಡೆದರೂ ಅಚ್ಚರಿಪಡಬೇಕಿಲ್ಲ.
ಮೊಹಮ್ಮದ್ ಸಿರಾಜ್: ಸೌತ್ ಆಫ್ರಿಕಾ ವಿರುದ್ಧದ ಸರಣಿಯಿಂದ ಬುಮ್ರಾ ಹೊರಬೀಳುತ್ತಿದ್ದಂತೆ ಬದಲಿ ಆಟಗಾರನಾಗಿ ಮೊಹಮ್ಮದ್ ಸಿರಾಜ್ ಆಯ್ಕೆಯಾಗಿದ್ದರು. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾ ಪಿಚ್ನಲ್ಲಿ ಆಡಿದ ಅನುಭವ ಕೂಡ ಸಿರಾಜ್ಗಿದೆ. ಹೀಗಾಗಿ ಬೌನ್ಸಿ ಪಿಚ್ನಲ್ಲಿ ಉತ್ತಮ ಬೌಲಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಸಿರಾಜ್ ಕೂಡ ಈ ಪಟ್ಟಿಯಲ್ಲಿದ್ದಾರೆ.
ಉಮೇಶ್ ಯಾದವ್: ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಮೊಹಮ್ಮದ್ ಶಮಿ ಹೊರಗುಳಿದಿದ್ದರು. ಈ ವೇಳೆ ತಂಡಕ್ಕೆ ಆಯ್ಕೆಯಾಗಿದ್ದ ಉಮೇಶ್ ಯಾದವ್ ಕೂಡ ಈಗ ಭಾರತ ತಂಡದ ಭಾಗವಾಗಿದ್ದಾರೆ. ಹೀಗಾಗಿ ಬುಮ್ರಾ ಸ್ಥಾನಕ್ಕೆ ಆಯ್ಕೆಯಾಗುವ ವೇಗಿಗಳ ಪಟ್ಟಿಯಲ್ಲಿ ಉಮೇಶ್ ಯಾದವ್ ಹೆಸರು ಕೂಡ ಕಾಣಿಸಿಕೊಂಡಿದೆ.
ಉಮ್ರಾನ್ ಮಲಿಕ್: 150 ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಯುವ ವೇಗಿ ಉಮ್ರಾನ್ ಮಲಿಕ್ ಆಸ್ಟ್ರೇಲಿಯಾ ಪಿಚ್ಗಳಿಗೆ ಉತ್ತಮ ಆಯ್ಕೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಅದರಲ್ಲೂ ಬೌನ್ಸಿ ಪಿಚ್ನಲ್ಲಿ ಮಲಿಕ್ ಟೀಮ್ ಇಂಡಿಯಾ ಪಾಲಿನ ವೇಗದ ಅಸ್ತ್ರವಾಗಬಹುದು. ಹೀಗಾಗಿ ಉಮ್ರಾನ್ ಮಲಿಕ್ರನ್ನು ಟೀಮ್ ಇಂಡಿಯಾಗೆ ಆಯ್ಕೆ ಮಾಡಬೇಕೆಂದು ಕೆಲ ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಬುಮ್ರಾ ಸ್ಥಾನದಲ್ಲಿ ಉಮ್ರಾನ್ ಮಲಿಕ್ ಸ್ಥಾನ ಪಡೆದರೂ ಅಚ್ಚರಿಪಡಬೇಕಿಲ್ಲ.