
ನವಿ ಮುಂಬೈನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಅಭ್ಯಾಸ ಪಂದ್ಯ ನಡೆಯಿತು. ಈ ಅಭ್ಯಾಸ ಪಂದ್ಯದೊಂದಿಗೆ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ 11 ಹೇಗಿರಲಿದೆ ಎಂಬುದು ಖತಿತವಾದಂತ್ತಾಗಿದೆ. ಅದರಲ್ಲೂ ತಂಡದ ಪರ ಇನ್ನಿಂಗ್ಸ್ ಆರಂಭಿಸುವವರು ಯಾರು ಎಂಬ ಪ್ರಶ್ನೆಗೆ ಖಚಿತ ಉತ್ತರ ಸಿಕ್ಕಿದೆ.

ವಾಸ್ತವವಾಗಿ ಕಳೆದೊಂದು ವರ್ಷದಿಂದ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್ನಲ್ಲಿ ತಂಡದ ಇನ್ನಿಂಗ್ಸ್ ಆರಂಭಿಸುತ್ತಿದ್ದರು. ಆದರೆ ಸಂಜು ಸ್ಯಾಮ್ಸನ್ ಅವರ ಕಳಪೆ ಪ್ರದರ್ಶನದಿಂದಾಗಿ ಅವರನ್ನು ಆರಂಭಿಕ ಸ್ಥಾನದಿಂದ ತೆಗೆದುಹಾಕುವುದರ ಜೊತೆಗೆ ಅವರನ್ನು ತಂಡದ ಪ್ಲೇಯಿಂಗ್ 11 ನಿಂದಲೂ ಕೈಬಿಡಲಾಗಿದೆ ಎಂಬುದು ಅಭ್ಯಾಸ ಪಂದ್ಯದಿಂದ ಗೊತ್ತಾಗಿದೆ.

ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಕಳಪೆ ಪ್ರದರ್ಶನ ನೀಡಿದ್ದರು. ಐದು ಪಂದ್ಯಗಳಲ್ಲಿ 9.2 ಬ್ಯಾಟಿಂಗ್ ಸರಾಸರಿಯೊಂದಿಗೆ ಕೇವಲ 46 ರನ್ ಗಳಿಸಿದ್ದರು. ಹೀಗಾಗಿ ಟಿ20 ವಿಶ್ವಕಪ್‌ನಲ್ಲಿ ಸಂಜುಗೆ ಆಡುವ ಅವಕಾಶ ಸಿಗುವುದು ಅನುಮಾನ ಎಂಬ ಮಾತು ಹರಿದಾಡಲಾರಂಭಿಸಿತ್ತು. ಇದೀಗ ಅದು ಧೃಡಪಟ್ಟಿದೆ.

ಅಭ್ಯಾಸ ಪಂದ್ಯದಲ್ಲಿ ಆಡುವ ಅವಕಾಶದಿಂದ ವಂಚಿತರಾಗಿರುವ ಸಂಜುಗೆ ಟಿ20 ವಿಶ್ವಕಪ್‌ನಲ್ಲಿಯೂ ಆಡುವ ಹನ್ನೊಂದರ ಪಟ್ಟಿಯಲ್ಲಿ ಅವಕಾಶ ಸಿಗುವುದಿಲ್ಲ. ಅವರ ಬದಲಿಗೆ ಇಶಾನ್ ಕಿಶನ್ ಇನ್ನಿಂಗ್ಸ್ ಪ್ರಾರಂಭಿಸಿದರೆ, ತಿಲಕ್ ವರ್ಮಾ 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಆರಂಭಿಕನಾಗಿ ಮಾತ್ರವಲ್ಲದೆ ಕಿಶನ್ ವಿಕೆಟ್ಕೀಪಿಂಗ್ ಕೂಡ ಮಾಡುವುದರಿಂದ ಸಂಜುಗೆ ಈ ಜವಾಬ್ದಾರಿಯೂ ಸಿಗುವುದಿಲ್ಲ.

ಇತ್ತ ಸಂಜು ಸ್ಯಾಮ್ಸನ್ ಸ್ಥಾನದಲ್ಲಿ ಆಡುವ ಅವಕಾಶ ಪಡೆದುಕೊಂಡಿರುವ ಇಶಾನ್ ಕಿಶನ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ 1 ಶತಕ ಹಾಗೂ 1 ಅರ್ಧಶತಕ ಬಾರಿಸಿದ್ದ ಕಿಶನ್, ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 7 ಸಿಕ್ಸರ್ ಮತ್ತು 2 ಬೌಂಡರಿಗಳ ಸಹಾಯದಿಂದ ಕೇವಲ 20 ಎಸೆತಗಳಲ್ಲಿ 53 ರನ್ ಬಾರಿಸಿದರು. ಹೀಗಾಗಿ ಕಿಶನ್ಗೆ ಆರಂಭಿಕ ಸ್ಥಾನ ಸಿಗುವುದು ಖಚಿತವಾಗಿದೆ.