- Kannada News Photo gallery Cricket photos India vs Australia 1st Test: Ashwin shatters Harbhajan and Warne's record
R Ashwin: 5 ವಿಕೆಟ್ ಕಬಳಿಸಿ 3 ದಾಖಲೆ ನಿರ್ಮಿಸಿದ ಅಶ್ವಿನ್
India vs Australia 1st Test: ಬಾರ್ಡರ್-ಗವಾಸ್ಕರ್ ಟೆಸ್ಟ್ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಅಶ್ವಿನ್ 2ನೇ ಸ್ಥಾನಕ್ಕೇರಿದ್ದಾರೆ. ಅದು ಕೂಡ ಆಸೀಸ್ ಸ್ಪಿನ್ನರ್ ನಾಥನ್ ಲಿಯಾನ್ ಅವರನ್ನು ಹಿಂದಿಕ್ಕುವ ಮೂಲಕ ಎಂಬುದೇ ಇಲ್ಲಿ ವಿಶೇಷ.
Updated on: Feb 11, 2023 | 6:30 PM

ನಾಗ್ಪುರದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿಗಳಲ್ಲಿ ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಪ್ರಮುಖರು.

ಮೊದಲ ಇನಿಂಗ್ಸ್ನಲ್ಲಿ ಹಿಟ್ಮ್ಯಾನ್ ಶತಕ ಸಿಡಿಸಿ ಮಿಂಚಿದರೆ, ರವೀಂದ್ರ ಜಡೇಜಾ 5 ವಿಕೆಟ್ ಕಬಳಿಸಿದ್ದರು. ಇನ್ನು ಆಸೀಸ್ ತಂಡದ 2ನೇ ಇನಿಂಗ್ಸ್ನಲ್ಲಿ ರವಿಚಂದ್ರನ್ ಅಶ್ವಿನ್ ಸ್ಪಿನ್ ಮೋಡಿ ಮಾಡಿದ್ದರು.

ಆಸ್ಟ್ರೇಲಿಯಾ ತಂಡದ ದ್ವಿತೀಯ ಇನಿಂಗ್ಸ್ನಲ್ಲಿ 12 ಓವರ್ ಬೌಲ್ ಮಾಡಿದ್ದ ಅಶ್ವಿನ್ ಕೇವಲ 37 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. ಪರಿಣಾಮ ಆಸೀಸ್ ಪಡೆಯು 91 ರನ್ಗಳಿಗೆ ಸರ್ವಪತನ ಕಂಡಿತು. ವಿಶೇಷ ಎಂದರೆ ಈ ಐದು ವಿಕೆಟ್ಗಳೊಂದಿಗೆ ಅಶ್ವಿನ್ ಮತ್ತೊಂದು ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಹೌದು, ಭಾರತದಲ್ಲಿ ಅತ್ಯಧಿಕ ಬಾರಿ 5 ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಇದೀಗ ರವಿಚಂದ್ರನ್ ಅಶ್ವಿನ್ 2ನೇ ಸ್ಥಾನಕ್ಕೇರಿದ್ದಾರೆ. ಅದು ಕೂಡ ಹರ್ಭಜನ್ ಸಿಂಗ್ ಅವರ ದಾಖಲೆಯನ್ನು ಮುರಿಯುವ ಮೂಲಕ ಹಾಗೂ ಅನಿಲ್ ಕುಂಬ್ಳೆಯ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದೇ ವಿಶೇಷ.

ಅಂದರೆ ಅಶ್ವಿನ್ ಇದುವರೆಗೆ 31 ಬಾರಿ 5 ವಿಕೆಟ್ ಕಬಳಿಸಿದ್ದಾರೆ. ಅದರಲ್ಲಿ 25 ಬಾರಿ ತವರಿನಲ್ಲೇ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಭಾರತದಲ್ಲಿ 25 ಬಾರಿ 5 ವಿಕೆಟ್ ಕಬಳಿಸಿದ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಸರಿಗಟ್ಟಿದರು. ಹಾಗೆಯೇ 24 ಬಾರಿ ಈ ಸಾಧನೆ ಮಾಡಿದ್ದ ಹರ್ಭಜನ್ ಸಿಂಗ್ ಅವರನ್ನು ಹಿಂದಿಕ್ಕಿದರು.

ಇನ್ನು ಈ ಐದು ವಿಕೆಟ್ಗಳೊಂದಿಗೆ ಶೇನ್ ವಾರ್ನ್ ಅವರ ವಿಶೇಷ ದಾಖಲೆಯನ್ನೂ ಕೂಡ ರವಿಚಂದ್ರನ್ ಅಶ್ವಿನ್ ಮುರಿದಿದ್ದಾರೆ. ಶೇನ್ ವಾರ್ನ್ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಪಂದ್ಯಗಳಿಂದ ಒಟ್ಟು 319 ವಿಕೆಟ್ ಕಬಳಿಸಿದ್ದರು. ಇದೀಗ ತವರಿನಲ್ಲಿ 320 ವಿಕೆಟ್ ಪಡೆದು ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರ ದಾಖಲೆಯನ್ನು ಅಶ್ವಿನ್ ಮುರಿದಿದ್ದಾರೆ.

ಇದಲ್ಲದೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಅಶ್ವಿನ್ 2ನೇ ಸ್ಥಾನಕ್ಕೇರಿದ್ದಾರೆ. ಅದು ಕೂಡ ಆಸೀಸ್ ಸ್ಪಿನ್ನರ್ ನಾಥನ್ ಲಿಯಾನ್ ಅವರನ್ನು ಹಿಂದಿಕ್ಕುವ ಮೂಲಕ ಎಂಬುದೇ ಇಲ್ಲಿ ವಿಶೇಷ. ಅಂದರೆ ಉಭಯ ಸ್ಪಿನ್ನರ್ಗಳ ನಡುವೆ ಈ ಟೂರ್ನಿಯಲ್ಲಿ ಪೈಪೋಟಿ ಕಂಡು ಬರುತ್ತಿದೆ.

ಇದಾಗ್ಯೂ ಅಶ್ವಿನ್ ಮೊದಲ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ ಕಬಳಿಸುವ ಮೂಲಕ ಬಾರ್ಡರ್-ಗವಾಸ್ಕರ್ ಟೂರ್ನಿಯಲ್ಲಿ 97 ವಿಕೆಟ್ಗಳ ಸಾಧನೆ ಮಾಡಿದ್ದಾರೆ. ಸದ್ಯ ಈ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ (111) ಅಗ್ರಸ್ಥಾನದಲ್ಲಿದ್ದು, ಮೂರನೇ ಸ್ಥಾನದಲ್ಲಿ ನಾಥನ್ ಲಿಯಾನ್ ಇದ್ದಾರೆ. ಹೀಗಾಗಿ ಮುಂದಿನ 3 ಟೆಸ್ಟ್ ಪಂದ್ಯಗಳಲ್ಲಿ ಅಶ್ವಿನ್ ಹಾಗೂ ನಾಥನ್ ಲಿಯಾನ್ ನಡುವೆ ವಿಕೆಟ್ ಟೇಕಿಂಗ್ ಪೈಪೋಟಿಯನ್ನು ನಿರೀಕ್ಷಿಸಬಹುದು.



















