
ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದಾರೆ. ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗದ ಕಾರಣ ಈ ಪ್ರವಾಸಕ್ಕೆ ಅವರು ಆಯ್ಕೆಯಾಗುವುದಿಲ್ಲ ಎಂಬುದು ಈ ಮೊದಲೇ ಗೊತ್ತಿತ್ತು. ಆದರೆ ಅಫ್ಘಾನಿಸ್ತಾನ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ್ದ ಯಶಸ್ವಿ ಜೈಸ್ವಾಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡದಿರುವುದು ಅಚ್ಚರಿಗೆ ಕಾರಣವಾಗಿದೆ (PC-PTI).

ಏಕೆಂದರೆ ಇದುವರೆಗೆ 6 ಏಕದಿನ ಪಂದ್ಯಗಳನ್ನಾಡಿರುವ ಜೈಸ್ವಾಲ್, 2 ಶತಕಗಳನ್ನು ಬಾರಿಸುವ ಮೂಲಕ ತಾನು ಏಕದಿನಕ್ಕೂ ಹೊಂದಿಕೊಳ್ಳುವ ಬ್ಯಾಟ್ಸ್‌ಮನ್ ಎಂಬ ಭರವಸೆ ಮೂಡಿಸಿದ್ದಾರೆ. ಅದರಲ್ಲೂ ಈ 2 ಶತಕಗಳು ಕಳೆದ ಮೂರು ಪಂದ್ಯಗಳಲ್ಲಿ ಬಂದಿರುವುದು ಅವರ ಫಾರ್ಮ್ಗೆ ಹಿಡಿದ ಕೈಗನ್ನಡಿಯಾಗಿದೆ. ಆದಾಗ್ಯೂ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿಲ್ಲ (PC-PTI).

ವಾಸ್ತವವಾಗಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ವಿರಾಟ್ ಕೊಹ್ಲಿ ಅಲಭ್ಯರಾದ ಕಾರಣ ಯಶಸ್ವಿ ಜೈಸ್ವಾಲ್ಗೆ ತಂಡದಲ್ಲಿ ಅವಕಾಶ ನೀಡಲಾಗಿತ್ತು. ಅದರಂತೆ ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡಿದ್ದ ಜೈಸ್ವಾಲ್, ಸರಣಿಯ ಎರಡನೇ ಪಂದ್ಯದಲ್ಲಿ ಕೇವಲ 4 ರನ್ ಬಾರಿಸಿದರಾದರೂ ಕೊನೆಯ ಏಕದಿನ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿ ಮಿಂಚಿದರು (PC-PTI).

ಹೀಗಾಗಿ ಜೈಸ್ವಾಲ್ಗೆ ಇಂಗ್ಲೆಂಡ್ ಪ್ರವಾಸಕ್ಕೆ ಏಕದಿನ ತಂಡದಲ್ಲಿ ಅವಕಾಶ ಸಿಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಇಂಗ್ಲೆಂಡ್ ಪ್ರವಾಸಕ್ಕೆ ಜೈಸ್ವಾಲ್ ಆಯ್ಕೆಯಾಗಿಲ್ಲ. ಇದಕ್ಕೆ ಕಾರಣವೂ ಇದ್ದು, ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಅಲಭ್ಯರಾಗಿದ್ದ ಕೊಹ್ಲಿ ತಂಡಕ್ಕೆ ಮರಳಿದ್ದಾರೆ. ಅಲ್ಲದೆ ಆರಂಭಿಕರಾಗಿ ರೋಹಿತ್ ಮತ್ತು ಗಿಲ್ ಆಡುವುದು ಖಚಿತವಾಗಿದೆ (PC-PTI).

ಅಲ್ಲದೆ ಇಂಗ್ಲೆಂಡ್ ಪ್ರವಾಸಕ್ಕೆ ರೋಹಿತ್ ಮತ್ತು ಕೊಹ್ಲಿಯನ್ನು ಆಯ್ಕೆ ಮಾಡಿರುವುದರಿಂದ ಇವರಿಬ್ಬರು 2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ ಆಡುವುದು ಖಚಿತವೆನ್ನಬಹುದು. ಹೀಗಾಗಿ ಇವರಿಬ್ಬರ ಸ್ಥಾನ ಖಚಿತವಾಗಿರುವ ಕಾರಣ, ಜೈಸ್ವಾಲ್ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವುದು ಅಸಾಧ್ಯ. ಆ ಕಾರಣದಿಂದಾಗಿ ಜೈಸ್ವಾಲ್ರನ್ನು ಏಕದಿನ ಸರಣಿಗೆ ಆಯ್ಕೆ ಮಾಡಿರದ ಸಾಧ್ಯತೆಗಳಿವೆ (PC-PTI).