- Kannada News Photo gallery Cricket photos India vs SA 2022: Ruturaj Gaikwad is allegedly dating THIS actress
Ruturaj Gaikwad: ಯುವ ನಟಿಯ ಪ್ರೀತಿಯಲ್ಲಿ ಬಿದ್ದ ರುತುರಾಜ್ ಗಾಯಕ್ವಾಡ್
Ruturaj Gaikwad Girlfriend: ಅತ್ಯುತ್ತಮ ಇನಿಂಗ್ಸ್ ಮೂಲಕ ಗಮನ ಸೆಳೆಯುತ್ತಿದ್ದಂತೆ ರುತುರಾಜ್ ಗಾಯಕ್ವಾಡ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದಾರೆ. ಈ ಟ್ರೆಂಡಿಂಗ್ ಜೊತೆ ಅವರ ಗರ್ಲ್ಫ್ರೆಂಡ್ ಯಾರು ಎಂಬುದನ್ನು ಅಭಿಮಾನಿಗಳು ಹುಡುಕಾಡುತ್ತಿದ್ದಾರೆ.
Updated on: Jun 15, 2022 | 11:45 AM

ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಮತ್ತೆ ತಮ್ಮ ಹಳೆಯ ಫಾರ್ಮ್ ಪ್ರದರ್ಶಿಸಿದ್ದಾರೆ. ಸೌತ್ ಆಫ್ರಿಕಾ ವಿರುದ್ದ ನಡೆಯುತ್ತಿರುವ ಮೊದಲೆರಡು ಟಿ20 ಪಂದ್ಯಗಳಲ್ಲಿ ವಿಫಲರಾಗಿದ್ದ ರುತುರಾಜ್, 3ನೇ ಪಂದ್ಯದಲ್ಲಿ ಅಬ್ಬರಿಸಿದ್ದರು. ಸ್ಪೋಟಕ ಇನಿಂಗ್ಸ್ ಆಡಿದ ಯುವ ಬ್ಯಾಟ್ಸ್ಮನ್ ದಕ್ಷಿಣ ಆಫ್ರಿಕಾ ಬೌಲರ್ಗಳ ಬೆಂಡೆತ್ತಿದ್ದರು.

ಅದರಲ್ಲೂ ವೇಗಿ ಅನ್ರಿಕ್ ನೋಕಿಯಾ ಒಂದೇ ಓವರ್ನಲ್ಲಿ ಸತತ 5 ಬೌಂಡರಿ ಬಾರಿಸುವ ಮೂಲಕ ಗಮನ ಸೆಳೆದರು. ಕೇವಲ 35 ಎಸೆತಗಳನ್ನು ಎದುರಿಸಿದ ರುತುರಾಜ್ 2 ಸಿಕ್ಸ್ ಹಾಗೂ 7 ಬೌಂಡರಿಯೊಂದಿಗೆ 57 ರನ್ ಚಚ್ಚಿದ್ದರು. ಈ ಬಿರುಸಿನ ಇನಿಂಗ್ಸ್ ಮೂಲಕ ಇತ್ತ ರುತುರಾಜ್ ಸುದ್ದಿಯಾದರೆ, ಅತ್ತ ಅವರ ಗರ್ಲ್ಫ್ರೆಂಡ್ ನಟಿ ಸಯಾಲಿ ಸಂಜೀವ್ ಕೂಡ ಸುದ್ದಿಯಾಗಿದ್ದಾರೆ.

ಅತ್ಯುತ್ತಮ ಇನಿಂಗ್ಸ್ ಮೂಲಕ ಗಮನ ಸೆಳೆಯುತ್ತಿದ್ದಂತೆ ರುತುರಾಜ್ ಗಾಯಕ್ವಾಡ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದಾರೆ. ಈ ಟ್ರೆಂಡಿಂಗ್ ಜೊತೆ ಅವರ ಗರ್ಲ್ಫ್ರೆಂಡ್ ಯಾರು ಎಂಬುದನ್ನು ಅಭಿಮಾನಿಗಳು ಹುಡುಕಾಡುತ್ತಿದ್ದಾರೆ. ಈ ವೇಳೆ ಮರಾಠಿ ನಟಿ ಸಯಾಲಿ ಸಂಜೀವ್ ಹೆಸರು ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಈ ಹಿಂದಿನಿಂದಲೂ ರುತುರಾಜ್ ನಟಿ ಸಯಾಲಿ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದನ್ನು ಪುಷ್ಠೀಕರಿಸುವಂತೆ ಇದೀಗ ಮತ್ತೊಮ್ಮೆ ಸಯಾಲಿ ಹೆಸರು ಯುವ ಕ್ರಿಕೆಟಿಗನೊಂದಿಗೆ ತಳುಕು ಹಾಕಿಕೊಂಡಿದೆ. ಅತ್ತ ಹಲವು ಬಾರಿ ಹೆಸರು ಕೇಳಿ ಬಂದರೂ ಸಯಾಲಿ ಸಂಜೀವ್ ಮಾತ್ರ ಜಾಣ ಮೌನದೊಂದಿಗೆ ಖುಲ್ಲಂ ಖುಲ್ಲಂವಾಗಿ ಪ್ರೀತಿಯನ್ನು ಮುಂದುವರೆಸಿದ್ದಾರೆ ಎಂದು ಹೇಳಲಾಗಿದೆ.

ಅಷ್ಟಕ್ಕೂ ಯಾರು ಈ ಸಯಾಲಿ ಸಂಜೀವ್ ಎಂದು ನೋಡುವುದಾದರೆ... ಮಾಡೆಲ್ ಕಮ್ ಕಿರುತೆರೆ ನಟಿ. 'ಪರ್ಫೆಕ್ಟ್ ಪತಿ' ಮತ್ತು 'ಗುಲ್ಮೊಹರ್' ನಂತಹ ಟಿವಿ ಧಾರಾವಾಹಿಗಳಿಂದ ಮಹಾರಾಷ್ಟ್ರದಲ್ಲಿ ಸಯಾಲಿ ಸಖತ್ ಫೇಮಸ್. ಇತ್ತೀಚೆಗೆ ಅವರು 'ಶುಭಮಂಗಲ್ ಆನ್‌ಲೈನ್' ಹೆಸರಿನ ವೆಸ್ ಸಿರೀಸ್ನಲ್ಲೂ ಕಾಣಿಸಿಕೊಂಡಿದ್ದಾರೆ. ಇನ್ನು ಜೀ ಮರಾಠಿಯ 'ಕಹೆ ದಿಯಾ ಪರ್ದೇಸ್' ಧಾರಾವಾಹಿಯಲ್ಲೂ ನಟಿಸಿದ್ದರು.

2016 ರಲ್ಲಿ ಸಯಾಲಿ ಝೀ ಮರಾಠಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದರು. ಅಭಿನಯದ ಜೊತೆ ಮಾಡೆಲ್ನಲ್ಲೂ ಮಿಂಚಿರುವ ಸಯಾಲಿ ಕ್ವಿಕರ್, ಬಿರ್ಲಾ ಐಕೇರ್ ಮತ್ತು ಡು ಇಟ್ ಬ್ರಾಂಡ್‌ಗಳಿಗೆ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಸಯಾಲಿ ಹಾಗೂ ರುತುರಾಜ್ ನಡುವಣ ಪ್ರೀತಿ ಪ್ರೇಮದ ವಿಚಾರ ಬೆಳಕಿಗೆ ಬಂದಿದ್ದು ಒಂದು ಕಾಮೆಂಟ್ ಮೂಲಕ ಎಂಬುದು ವಿಶೇಷ.

ರುತುರಾಜ್ ಗಾಯಕ್‌ವಾಡ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಸಯಾಲಿ ಮಾಡಿದ ಕಾಮೆಂಟ್ ತುಂಬಾ ವೈರಲ್ ಆಗಿತ್ತು. ರುತುರಾಜ್ ಅವರ ಪೋಸ್ಟ್‌ವೊಂದಕ್ಕೆ ಹಾರ್ಟ್ ಎಮೋಜಿಯೊಂದಿಗೆ ವಾಹ್ ವಾಹ್ ಎಂದು ಕಾಮೆಂಟ್ ಮಾಡಿದ್ದರು.

ಅದಕ್ಕೆ ಹಾರ್ಟ್ ಎಮೋಜಿಯೊಂದಿಗೆ ರುತುರಾಜ್ ಗಾಯಕ್ವಾಡ್ ಕೂಡ ಪ್ರತಿಕ್ರಿಯಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಹೀಗೆ ಕಾಣಿಸಿಕೊಂಡ ಲವ್ ಎಮೋಜಿಗಳು ಇವರಿಬ್ಬರ ನಡುವಣ ಪ್ರೀತಿಯನ್ನು ಸಾರಿತ್ತು.

ಇದಾಗ್ಯೂ ಇಬ್ಬರೂ ತಮ್ಮ ಪ್ರೀತಿಯ ವಿಚಾರವನ್ನೂ ಇನ್ನೂ ಕೂಡ ಅಧಿಕೃತವಾಗಿ ಬಹಿರಂಗಪಡಿಸಿಲ್ಲ ಎಂಬುದು ವಿಶೇಷ.




