ಹರಾರೆಯ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಇಂದು ಭಾರತ ಹಾಗೂ ಜಿಂಬಾಬ್ವೆ ನಡುವೆ ಎರಡನೇ ಏಕದಿನ ಪಂದ್ಯ ಆಯೋಜಿಸಲಾಗಿದೆ. ಮೊದಲ ಪಂದ್ಯದಲ್ಲಿ 10 ವಿಕೆಟ್ ಗಳಿಂದ ಗೆದ್ದು ಬೀಗಿದ ಟೀಮ್ ಇಂಡಿಯಾ ಇಂದಿನ ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಂಡ ಸಾಧನೆ ಮಾಡಲಿದೆ.
ಕಳೆದ ಪಂದ್ಯದಲ್ಲಿ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಜಿಂಬಾಬ್ವೆ 189 ರನ್ ಗೆ ಸರ್ವಪತನ ಕಂಡಿತ್ತು. ಭಾರತ ಈ ಮೊತ್ತವನ್ನು ಒಂದೂ ವಿಕೆಟ್ ಕಳೆದುಕೊಳ್ಳದೆ ಗೆದ್ದು ಬೀಗಿತ್ತು. ಆದರೆ, ಇಂಜುರಿಗೆ ತುತ್ತಾಗಿರುವ ಶಿಖರ್ ಧವನ್ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ.
ಹೀಗಾದಲ್ಲಿ ಶುಭ್ಮನ್ ಗಿಲ್ ಜೊತೆಗೆ ಕೆಎಲ್ ರಾಹುಲ್ ಅಥವಾ ಸಂಜು ಸ್ಯಾಮ್ಸನ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಧವನ್ ಸ್ಥಾನವನ್ನು ರಾಹುಲ್ ತ್ರಿಪಾಠಿ ತುಂಬಬಹುದು. ಕಳೆದ ಪಂದ್ಯದಲ್ಲಿ ಧವನ್–ಗಿಲ್ ಬಿಟ್ಟರೆ ಉಳಿದ ಯಾವ ಬ್ಯಾಟರ್ ಗೂ ಅವಕಾಶ ಸಿಗಲಿಲ್ಲ. ಹೀಗಾಗಿ ಇಂದು ಟಾಸ್ ಗೆದ್ದರೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೂ ಅಚ್ಚರಿಯಿಲ್ಲ.
ಭಾರತದ ಬೌಲಿಂಗ್ ಬಲಿಷ್ಠವಾಗಿದೆ. ದೀರ್ಘ ಕಾಲದ ನಂತರ ಕಣಕ್ಕೆ ಮರಳಿರುವ ಬೌಲರ್ ದೀಪಕ್ ಚಹರ್ ಮೊದಲ ಪಂದ್ಯದಲ್ಲೇ ಮಾರಕ ದಾಳಿ ಸಂಘಟಿಸಿದರು. ಏಳು ಓವರ್ ಬೌಲಿಂಗ್ ಮಾಡಿ ಮೂರು ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಕೂಡ ಬಾಚಿಕೊಂಡರು. ಪ್ರಸಿದ್ಧ ಕೃಷ್ಣ ಕೂಡ ಮೂರು ವಿಕೆಟ್ ಕಬಳಿಸಿದ್ದರು. ಕುಲ್ದೀಪ್–ಅಕ್ಷರ್ ಸ್ಪಿನ್ ಮೋಡಿ ಕೂಡ ವರ್ಕ್ ಆಗಿತ್ತು.
ಇತ್ತ ರೆಗಿಸ್ ಚಕಾಬ್ವಾ ನಾಯಕತ್ವದ ಜಿಂಬಾಬ್ವೆ ತಂಡವು ರಾಹುಲ್ ಬಳಗದ ಬ್ಯಾಟರ್‌ಗಳಿಗೆ ಹಾಗೂ ಬೌಲಿಂಗ್ ಪಡೆಯನ್ನು ಎಚ್ಚರಿಕೆಯಿಂದ ಎದುರಿಸಿದರೆ ಮಾತ್ರ ಗೆಲುವಿನ ಕನಸು ಕಾಣಬಹುದು. ಜಿಂಬಾಬ್ವೆ ತಂಡ ಏಕದಿನ ಮತ್ತು ಟಿ20 ಸರಣಿಯಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದ್ದು ಮರೆಯುವಂತಿಲ್ಲ.
ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿರುವ ಪಿಚ್ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಸಮತೋಲಿತವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ವೇಗಿಗಳು ಹೆಚ್ಚುವರಿ ಬೌನ್ಸ್ ಪಡೆಯುವ ಸಾಧ್ಯತೆಯಿದೆ. ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ ಕೇವಲ 200 ರನ್ ಮತ್ತು 2ನೇ ಬ್ಯಾಟಿಂಗ್ ಮಾಡುವ ತಂಡಕ್ಕೆ ಪಿಚ್ ಹೆಚ್ಚು ಸಹಾಯಕವಾಗಿರಲಿದೆ.
ಭಾರತ ಮತ್ತು ಜಿಂಬಾಬ್ವೆ ನಡುವಿನ ಎರಡನೇ ಏಕದಿನ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12:45ಕ್ಕೆ ಪ್ರಾರಂಭವಾಗಲಿದೆ. ಸೋನಿ ಚಾನೆಲ್ (Sony Sports Network) ಲೈವ್ ಟೆಲಿಕಾಸ್ಟ್ ಮಾಡಲಿದೆ. ಹಾಗೆಯೇ ಸೋನಿ ಲೈವ್ ಆ್ಯಪ್ ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.
Published On - 10:08 am, Sat, 20 August 22