- Kannada News Photo gallery Cricket photos Kannada News | IPL 2023: How can Mumbai Indians qualify for IPL 2023 playoffs
IPL 2023: 80 ಪ್ಲಸ್ ರನ್, 12 ಓವರ್: ಮುಂಬೈ ಇಂಡಿಯನ್ಸ್ ಹೀಗೆ ಗೆಲ್ಲಲೇಬೇಕು
IPL 2023 Kannada: ಮಧ್ಯಾಹ್ನ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯುತ್ತಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಮುಂಬೈ ಇಂಡಿಯನ್ಸ್ 16 ಪಾಯಿಂಟ್ಸ್ ಕಲೆಹಾಕಬಹುದು.
Updated on: May 21, 2023 | 2:52 PM

IPL 2023: ಐಪಿಎಲ್ನ ಪ್ಲೇಆಫ್ ಹೋರಾಟವು ರೋಚಕಘಟ್ಟಕ್ಕೆ ಬಂದು ನಿಂತಿದೆ. ಈಗಾಗಲೇ ಗುಜರಾತ್ ಟೈಟಾನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಪ್ಲೇಆಫ್ ಪ್ರವೇಶಿಸಿದೆ. ಇನ್ನುಳಿದಿರುವುದು ಕೇವಲ 1 ಸ್ಥಾನ ಮಾತ್ರ.

ಈ ಒಂದು ಸ್ಥಾನಕ್ಕಾಗಿ ಇದೀಗ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಅದರಂತೆ ಸೂಪರ್ ಸಂಡೆಯ 2 ಪಂದ್ಯಗಳು ಉಭಯ ತಂಡಗಳ ಪ್ಲೇಆಫ್ ಹಾದಿಯನ್ನು ನಿರ್ಧರಿಸಲಿದೆ.

ಇಲ್ಲಿ ಮಧ್ಯಾಹ್ನ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯುತ್ತಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಮುಂಬೈ ಇಂಡಿಯನ್ಸ್ 16 ಪಾಯಿಂಟ್ಸ್ ಕಲೆಹಾಕಬಹುದು. ಇದಾಗ್ಯೂ ಪ್ಲೇಆಫ್ ಹಂತಕ್ಕೇರುವುದನ್ನು ಖಚಿತಪಡಿಸಿಕೊಳ್ಳಲಾಗುವುದಿಲ್ಲ.

ಏಕೆಂದರೆ ರಾತ್ರಿ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಆರ್ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಸೆಣಸಲಿದೆ. ಈ ಪಂದ್ಯದಲ್ಲಿ ಆರ್ಸಿಬಿ ಗೆದ್ದರೆ ಪ್ಲೇಆಫ್ ಹಂತಕ್ಕೇರುವುದು ಬಹುತೇಕ ಖಚಿತ.

ಏಕೆಂದರೆ ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ ಉಭಯ ತಂಡಗಳು 13 ಪಂದ್ಯಗಳಲ್ಲಿ 7 ಜಯ ಸಾಧಿಸಿ 14 ಅಂಕಗಳನ್ನು ಹೊಂದಿದೆ. ಆದರೆ ಇಲ್ಲಿ ಆರ್ಸಿಬಿ ತಂಡದ ನೆಟ್ ರನ್ ರೇಟ್ +0.180 ಇರುವ ಕಾರಣ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

ಮತ್ತೊಂದೆಡೆ ಮೈನಸ್ 0.128 ನೆಟ್ ರನ್ ರೇಟ್ ಹೊಂದಿರುವ ಮುಂಬೈ ಇಂಡಿಯನ್ಸ್ 6ನೇ ಸ್ಥಾನದಲ್ಲಿದೆ. ಹೀಗಾಗಿಯೇ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದರಷ್ಟೇ ಸಾಲದು. ಆರ್ಸಿಬಿಗಿಂತ ಹೆಚ್ಚಿನ ನೆಟ್ ರನ್ ರೇಟ್ ಹೊಂದಿದ್ದರೆ ಮಾತ್ರ ಪ್ಲೇಆಫ್ ಪ್ರವೇಶಿಸಬಹುದು.

ಇದಕ್ಕಾಗಿ ಮುಂಬೈ ಇಂಡಿಯನ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಕನಿಷ್ಠ 80 ರನ್ಗಳಿಂದ ಸೋಲಿಸಬೇಕಾಗುತ್ತದೆ. ಒಂದು ವೇಳೆ ಚೇಸಿಂಗ್ ಮಾಡುವುದಾದರೆ ಕನಿಷ್ಠ 12 ಓವರ್ಗಳಲ್ಲಿ ಎಸ್ಆರ್ಹೆಚ್ ನೀಡುವ ಟಾರ್ಗೆಟ್ ಅನ್ನು ಚೇಸ್ ಮಾಡಬೇಕು.

ಇಲ್ಲಿ ಮತ್ತೊಂದು ಅಂಶ ಎಂದರೆ ಮುಂಬೈ ಇಂಡಿಯನ್ಸ್ ತಂಡದ ಗೆಲುವಿನ ಲೆಕ್ಕಾಚಾರ ಕೂಡ ಆರ್ಸಿಬಿ ತಂಡದ ಜಯದ ಮೇಲೆ ಅವಲಂಭಿತವಾಗಿರಲಿದೆ. ಅಂದರೆ ಆರ್ಸಿಬಿ ಗುಜರಾತ್ ಟೈಟಾನ್ಸ್ ವಿರುದ್ಧ 100 ರನ್ಗಳಿಂದ ಜಯ ಸಾಧಿಸಿದರೆ, ಇತ್ತ ಮುಂಬೈ ಇಂಡಿಯನ್ಸ್ ಎಸ್ಆರ್ಹೆಚ್ ವಿರುದ್ಧ 180 ರನ್ಗಳಿಂದ ಗೆದ್ದಿರಬೇಕು. ಅಂದರೆ ಮಾತ್ರ ಆರ್ಸಿಬಿಗಿಂತ ಮುಂಬೈ ಇಂಡಿಯನ್ಸ್ ಹೆಚ್ಚಿನ ನೆಟ್ ರನ್ ರೇಟ್ ಪಡೆಯಬಹುದು.

ಆದರೆ ಇಲ್ಲಿ ಮುಂಬೈ ಇಂಡಿಯನ್ಸ್ ಮೊದಲು ಪಂದ್ಯವಾಡುವುದರಿಂದ ಆರ್ಸಿಬಿಯ ಗೆಲುವಿನ ಬಳಿಕದ ನೆಟ್ ರನ್ ರೇಟ್ ಅನ್ನು ಅಂದಾಜಿಸಲಾಗುವುದಿಲ್ಲ. ಇದಾಗ್ಯೂ ಪ್ರಸ್ತುತ ನೆಟ್ ರನ್ ರೇಟ್ ಅನ್ನು ಗಣನೆಗೆ ತೆಗೆದುಕೊಂಡರೂ ಕನಿಷ್ಠ 80+ ರನ್ಗಳಿಂದ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಮುಂಬೈ ಇಂಡಿಯನ್ಸ್ ಸೋಲಿಸಬೇಕಾಗುತ್ತದೆ.

ಅತ್ತ ಆರ್ಸಿಬಿಗೆ ಪ್ಲೇಆಫ್ ಪ್ರವೇಶಿಸಲು ಗುಜರಾತ್ ಟೈಟಾನ್ಸ್ ವಿರುದ್ಧದ ಗೆಲುವೊಂದೇ ಸಾಕು. ಆದರೆ ಮುಂಬೈ ಇಂಡಿಯನ್ಸ್ ಅಮೋಘ ಗೆಲುವು ಸಾಧಿಸಿ ನೆಟ್ ರನ್ ರೇಟ್ ಹೆಚ್ಚಿಸಿಕೊಂಡರೆ ಮಾತ್ರ ಪ್ಲೇಆಫ್ ಪ್ರವೇಶಿಸಬಹುದು.

ಒಂದು ವೇಳೆ ಮುಂಬೈ ಇಂಡಿಯನ್ಸ್ ತಂಡವು ಎಸ್ಆರ್ಹೆಚ್ ವಿರುದ್ಧ ಗೆದ್ದು, ಆರ್ಸಿಬಿ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ ಸೋತರೆ, ರೋಹಿತ್ ಶರ್ಮಾ ಪಡೆ 16 ಅಂಕಗಳೊಂದಿಗೆ ನೇರವಾಗಿ ಪ್ಲೇಆಫ್ ಪ್ರವೇಶಿಸಲಿದೆ. ಇಲ್ಲಿ ಯಾವುದೇ ನೆಟ್ ರನ್ ರೇಟ್ ಗಣನೆಗೆ ಬರುವುದಿಲ್ಲ.
