- Kannada News Photo gallery Cricket photos Kannada News | IPL 2023 Playoffs: CSK entered to IPL final
IPL 2023: ಫೈನಲ್ಗೆ ಎಂಟ್ರಿ ಕೊಟ್ಟ ಚೆನ್ನೈ ಸೂಪರ್ ಕಿಂಗ್ಸ್
IPL 2023 CSK Kannada: ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು.
Updated on:May 23, 2023 | 11:30 PM

IPL 2023 GT vs CSK: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ಗೆ ಸೋಲುಣಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಫೈನಲ್ಗೆ ಪ್ರವೇಶಿಸಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ತಂಡಕ್ಕೆ ಆರಂಭಿಕರಾದ ಡೆವೊನ್ ಕಾನ್ವೆ ಹಾಗೂ ರುತುರಾಜ್ ಗಾಯಕ್ವಾಡ್ ಉತ್ತಮ ಆರಂಭ ಒದಗಿಸಿದ್ದರು.

ಮೊದಲ ವಿಕೆಟ್ಗೆ 87 ರನ್ ಪೇರಿಸಿದ ಈ ಜೋಡಿಯನ್ನು ಮೋಹಿತ್ ಶರ್ಮಾ ಬೇರ್ಪಡಿಸಿದರು. ಅದರಂತೆ 60 ರನ್ ಬಾರಿಸಿದ್ದ ರುತುರಾಜ್ ಗಾಯಕ್ವಾಡ್ ಮೊದಲು ನಿರ್ಗಮಿಸಿದರು. ಆ ಬಳಿಕ ಕಾನ್ವೆ (40) ಕೂಡ ವಿಕೆಟ್ ಕೈಚೆಲ್ಲಿದರು.

ಇದಾದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಸಿಎಸ್ಕೆ ತಂಡವು ಕುಸಿತಕ್ಕೊಳಗಾದರೂ ಅಂತಿಮವಾಗಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಪೇರಿಸುವಲ್ಲಿ ಯಶಸ್ವಿಯಾದರು.

173 ರನ್ಗಳ ಸ್ಪರ್ಧಾತ್ಮಕ ಗುರಿ ಪಡೆದ ಗುಜರಾತ್ ಟೈಟಾನ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಪವರ್ಪ್ಲೇನಲ್ಲೇ ವೃದ್ದಿಮಾನ್ ಸಾಹ ಹಾಗೂ ಹಾರ್ದಿಕ್ ಪಾಂಡ್ಯ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಇದಾಗ್ಯೂ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ಶುಭ್ಮನ್ ಗಿಲ್ 40 ರನ್ ಬಾರಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಆದರೆ ಗಿಲ್ ನಿರ್ಗಮನದ ಬೆನ್ನಲ್ಲೇ ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ ಕೂಡ ವಿಕೆಟ್ ಒಪ್ಪಿಸಿದರು.

ಕೊನೆಯ 4 ಓವರ್ಗಳಲ್ಲಿ ಗುಜರಾತ್ ಟೈಟಾನ್ಸ್ಗೆ ಗೆಲ್ಲಲು 58 ರನ್ಗಳು ಬೇಕಿತ್ತು. ಈ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರಶೀದ್ ಖಾನ್ 30 ರನ್ ಬಾರಿಸಿ ಔಟಾದರು. ಇದಾಗ್ಯೂ ಕೊನೆಯ ಓವರ್ನಲ್ಲಿ 27 ರನ್ಗಳ ಗುರಿ ಪಡೆದ ಗುಜರಾತ್ ಟೈಟಾನ್ಸ್ ತಂಡವು 157 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಸಿಎಸ್ಕೆ 15 ರನ್ಗಳ ಭರ್ಜರಿ ಜಯ ಸಾಧಿಸಿತು.

ಅಂದಹಾಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ನಲ್ಲಿ ಫೈನಲ್ ಪ್ರವೇಶಿಸುತ್ತಿರುವುದು ಇದು 10ನೇ ಬಾರಿ. ಅಂದರೆ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ ಐಪಿಎಲ್ ಫೈನಲ್ ಆಡಿದ ದಾಖಲೆ ಸಿಎಸ್ಕೆ ತಂಡದ ಹೆಸರಿನಲ್ಲಿದೆ. 2ನೇ ಸ್ಥಾನದಲ್ಲಿ 6 ಫೈನಲ್ ಪಂದ್ಯವಾಡಿದ ಮುಂಬೈ ಇಂಡಿಯನ್ಸ್ ಇದೆ.

ಈ ಸೋಲಿನೊಂದಿಗೆ ಗುಜರಾತ್ ಟೈಟಾನ್ಸ್ ತಂಡವು 2ನೇ ಕ್ವಾಲಿಫೈಯರ್ ಆಡಬೇಕಿದೆ. ಅಂದರೆ ಬುಧವಾರ ನಡೆಯಲಿರುವ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದಲ್ಲಿ ಗೆಲ್ಲುವ ತಂಡದೊಡನೆ ಗುಜರಾತ್ ಟೈಟಾನ್ಸ್ ತಂಡ 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡ ಸಿಎಸ್ಕೆ ವಿರುದ್ಧ ಫೈನಲ್ ಆಡಲಿದೆ.
Published On - 11:24 pm, Tue, 23 May 23




