IPL 2023: RR ವಿರುದ್ಧ ಗೆದ್ದರೂ RCB ಟಾಪ್-4 ಹಂತಕ್ಕೇರುವುದಿಲ್ಲ
IPL 2023 Kannada: ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವು 14 ಅಂಕಗಳನ್ನು ಹೊಂದಿದ್ದು, ಮುಂದಿನ 2 ಪಂದ್ಯಗಳನ್ನು ಗೆದ್ದರೆ ಪ್ಲೇಆಫ್ ಆಡುವುದು ಖಚಿತ ಎಂದೇ ಹೇಳಬಹುದು.
Updated on: May 13, 2023 | 11:52 PM

IPL 2023: ಐಪಿಎಲ್ನ 60ನೇ ಪಂದ್ಯದಲ್ಲಿ ಆರ್ಸಿಬಿ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದರೂ ಪಾಯಿಂಟ್ಸ್ ಟೇಬಲ್ನಲ್ಲಿ ಟಾಪ್-4 ಹಂತಕ್ಕೇರುವುದಿಲ್ಲ. ಬದಲಾಗಿ 5 ಅಥವಾ 6ನೇ ಸ್ಥಾನದಲ್ಲೇ ಉಳಿಯಲಿದೆ.

ಏಕೆಂದರೆ ಈಗಾಗಲೇ 16 ಅಂಕಗಳನ್ನು ಹೊಂದಿರುವ ಗುಜರಾತ್ ಟೈಟಾನ್ಸ್ ತಂಡವು ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನೊಂದು ಪಂದ್ಯ ಗೆದ್ದರೆ ಗುಜರಾತ್ ಪ್ಲೇಆಫ್ ಪ್ರವೇಶಿಸಲಿದೆ.

ಇನ್ನು ಸಿಎಸ್ಕೆ ತಂಡವು 15 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದು, ಧೋನಿ ಪಡೆ ಮುಂದಿನ 2 ಪಂದ್ಯಗಳಲ್ಲಿ 1 ರಲ್ಲಿ ಜಯ ಸಾಧಿಸಿದರೂ ಪ್ಲೇಆಫ್ ಆಡುವುದು ಬಹುತೇಕ ಖಚಿತವಾಗಲಿದೆ.

ಹಾಗೆಯೇ 3ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ 14 ಅಂಕಗಳನ್ನು ಹೊಂದಿದ್ದು, ಮುಂದಿನ 2 ಪಂದ್ಯ ಗೆದ್ದರೆ ಪ್ಲೇಆಫ್ ಆಡುವುದು ಖಚಿತ ಎಂದೇ ಹೇಳಬಹುದು.

ಲಕ್ನೋ ಸೂಪರ್ ಜೈಂಟ್ಸ್ ತಂಡವು 13 ಅಂಕಗಳೊಂದಿಗೆ ಇದೀಗ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇನ್ನುಳಿದಿರುವ 2 ಮ್ಯಾಚ್ಗಳಲ್ಲಿ ಗೆದ್ದರೆ ಪ್ಲೇಆಫ್ ಆಡುವುದು ಬಹುತೇಕ ಖಚಿತಪಡಿಸಿಕೊಳ್ಳಬಹುದು.

ಹಾಗೆಯೇ 11 ಪಂದ್ಯಗಳಲ್ಲಿ 5 ಜಯ ಸಾಧಿಸಿರುವ ಆರ್ಸಿಬಿ ತಂಡವು ಇದೀಗ 7ನೇ ಸ್ಥಾನದಲ್ಲಿದೆ. ಒಂದು ವೇಳೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದರೆ ಒಟ್ಟು 12 ಪಾಯಿಂಟ್ಸ್ ಪಡೆಯಲಿದೆ.

ಇತ್ತ -0.345 ನೆಟ್ ರನ್ ರೇಟ್ ಹೊಂದಿರುವ ಆರ್ಸಿಬಿ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದರೆ ಮಾತ್ರ 5ನೇ ಸ್ಥಾನಕ್ಕೇರಬಹುದು. ಏಕೆಂದರೆ ರಾಜಸ್ಥಾನ್ ತಂಡವು ಈಗಾಗಲೇ +0.633 ನೆಟ್ ರನ್ ರೇಟ್ನೊಂದಿಗೆ 12 ಅಂಕಗಳನ್ನು ಹೊಂದಿದೆ.

ಹೀಗಾಗಿ ಆರ್ಸಿಬಿ ತಂಡವು ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಬೃಹತ್ ಮೊತ್ತದ ಅಂತರದಿಂದ ಗೆಲ್ಲುವ ಮೂಲಕ ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳಬೇಕಿದೆ. ಈ ಮೂಲಕ 12 ಅಂಕಗಳೊಂದಿಗೆ 5ನೇ ಸ್ಥಾನಕ್ಕೇರಲು ಪ್ರಯತ್ನಿಸಬಹುದು.

ಅತ್ತ ಲಕ್ನೋ ಸೂಪರ್ ಜೈಂಟ್ಸ್ ತಂಡವು 12 ಪಂದ್ಯಗಳಿಂದ 13 ಅಂಕಗಳನ್ನು ಹೊಂದಿದೆ. ಅಂದರೆ 6 ಪಂದ್ಯಗಳಲ್ಲಿ ಜಯ ಸಾಧಿಸಿದ ಲಕ್ನೋ 12 ಪಾಯಿಂಟ್ಸ್ ಪಡೆದಿದೆ. ಹಾಗೆಯೇ ಒಂದು ಪಂದ್ಯ ಮಳೆಯಿಂದ ರದ್ದಾದ ಕಾರಣ 1 ಪಾಯಿಂಟ್ ಪಡೆದುಕೊಂಡಿದೆ. ಅದರಂತೆ ಇದೀಗ 13 ಅಂಕಗಳೊಂದಿಗೆ 4ನೇ ಸ್ಥಾನ ಅಲಂಕರಿಸಿದೆ.

ಇತ್ತ ಆರ್ಸಿಬಿ ತಂಡವು 12 ಪಂದ್ಯಗಳಲ್ಲಿ 6 ಜಯ ಸಾಧಿಸಿದರೂ ಒಟ್ಟು 12 ಅಂಕಗಳನ್ನು ಮಾತ್ರ ಪಡೆಯಲಿದೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದರೂ ಆರ್ಸಿಬಿ ತಂಡವು ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ ಟಾಪ್-4 ಹಂತಕ್ಕೇರಲಾಗುವುದಿಲ್ಲ. ಬದಲಾಗಿ 5ನೇ ಅಥವಾ 6ನೇ ಸ್ಥಾನ ಅಲಂಕರಿಸಲಿದೆ.



















