IPL 2023 RCB vs CSK: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಫೀಲ್ಡಿಂಗ್ ಆಯ್ಕೆ ಮಾಡಿದ್ದರು.
ಅದರಂತೆ ಇನಿಂಗ್ಸ್ ಆರಂಭಿಸಿದ ಸಿಎಸ್ಕೆ ತಂಡಕ್ಕೆ ಡೆವೊನ್ ಕಾನ್ವೆ ಸ್ಪೋಟಕ ಆರಂಭ ಒದಗಿಸಿದ್ದರು. ಆರಂಭದಿಂದಲೇ ಆರ್ಸಿಬಿ ಬೌಲರ್ಗಳನ್ನು ಹಿಗ್ಗಾಮುಗ್ಗಾ ದಂಡಿಸಿದ ಕಾನ್ವೆ 45 ಎಸೆತಗಳಲ್ಲಿ 6 ಫೋರ್ ಹಾಗೂ 6 ಸಿಕ್ಸ್ನೊಂದಿಗೆ 83 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ 27 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 2 ಫೋರ್ನೊಂದಿಗೆ 52 ರನ್ ಬಾರಿಸಿದರು. ಇನ್ನು ಅಂತಿಮ ಹಂತದಲ್ಲಿ ಮೊಯೀನ್ ಅಲಿ ಹಾಗೂ ರವೀಂದ್ರ ಜಡೇಜಾ ಉಪಯುಕ್ತ ಕಾಣಿಕೆ ನೀಡಿದರು.
ಅದರಲ್ಲೂ ಕೊನೆಯ ಓವರ್ ಎಸೆದ ಹರ್ಷಲ್ ಪಟೇಲ್ ಅತಿರಿಕ್ತ ರನ್ಗಳನ್ನು ನೀಡುವ ಮೂಲಕ ದುಬಾರಿಯಾದರು. 20 ಓವರ್ನ ಮೊದಲ ಎಸೆತದಲ್ಲಿ 1 ರನ್ ನೀಡಿದ ಹರ್ಷಲ್ ಪಟೇಲ್, ಆ ಬಳಿಕ ನೋಬಾಲ್ ಎಸೆದರು.
ಇದಾದ ಬಳಿಕ ಫ್ರೀಹಿಟ್ನಲ್ಲಿ 1 ರನ್ ನೀಡಿದರು. ಆ ನಂತರ ಮತ್ತೆ ವೈಡ್ ಎಸೆದರು. ಆ ಬಳಿಕ ಮತ್ತೊಂದು ನೋಬಾಲ್. ತಕ್ಷಣವೇ ಅಂಪೈರ್ ಹರ್ಷಲ್ ಪಟೇಲ್ ಅವರ ಬೌಲಿಂಗ್ ತಡೆದರು.
ಇದಕ್ಕೆ ಮುಖ್ಯ ಕಾರಣ ಅವರು ಎಸೆದ ಎರಡೂ ಬೀಮರ್ ನೋಬಾಲ್ಗಳು. ಅಂದರೆ ಸೊಂಟಕ್ಕಿಂತ ಮೇಲ್ಭಾಗಕ್ಕೆ ನೇರವಾಗಿ ಚೆಂಡೆಸೆಯುವ ಮೂಲಕ ಹರ್ಷಲ್ ಪಟೇಲ್ ತಪ್ಪು ಮಾಡಿದರು. ಮೊದಲ ಬೀಮರ್ ಎಸೆದಾಗಲೇ ಅಂಪೈರ್ ಎಚ್ಚರಿಕೆ ನೀಡಿದ್ದರು. ಇದಾಗ್ಯೂ 2ನೇ ಬಾರಿ ಅಂತಹದ್ದೇ ಬೀಮರ್ ಎಸೆದಿದ್ದರಿಂದ ಅಂಪೈರ್ ಅವರ ಬೌಲಿಂಗ್ ಅನ್ನು ನಿಷೇಧಿಸಿದರು.
ಐಸಿಸಿ ನಿಯಮದ ಪ್ರಕಾರ, ಬ್ಯಾಟ್ಸ್ಮನ್ಗಳ ಸುರಕ್ಷತೆಯ ದೃಷ್ಟಿಯಲ್ಲಿ ಸೊಂಟದ ಮೇಲೆ ಅಥವಾ ಎದೆ ಭಾಗದತ್ತ ಬರುವ ಅಪಾಯಕಾರಿ ಎಸೆತಗಳನ್ನು ನೋ ಬಾಲ್ ಎಂದು ಪರಿಗಣಿಸಲಾಗುತ್ತದೆ. ಮೊದಲ ಬಾರಿಯ ಬೀಮರ್ ಎಸೆತಕ್ಕೆ ಅಂಪೈರ್ ಎಚ್ಚರಿಕೆ ನೀಡುತ್ತಾರೆ. ಅದೇ ತಪ್ಪು ಮರುಕಳಿಸಿದರೆ ಅವರ ಬೌಲಿಂಗ್ ಅನ್ನು ತಡೆ ಹಿಡಿಯಬಹುದು.
ಇದೇ ಕಾರಣಕ್ಕಾಗಿ 20ನೇ ಓವರ್ನಲ್ಲಿ 3 ಬೌಲ್ ಮಾಡಿದ ಬಳಿಕ ಹರ್ಷಲ್ ಪಟೇಲ್ ಅವರ ಬೌಲಿಂಗ್ ಅನ್ನು ನಿಷೇಧಿಸಲಾಯಿತು. ಆ ಬಳಿಕ ಗ್ಲೆನ್ ಮ್ಯಾಕ್ಸ್ವೆಲ್ 3 ಎಸೆತಗಳನ್ನು ಎಸೆಯುವ ಮೂಲಕ 20ನೇ ಓವರ್ ಪೂರ್ಣಗೊಳಿಸಿದ್ದರು.
Published On - 4:08 pm, Tue, 18 April 23