17ನೇ ಆವೃತ್ತಿಯ ಐಪಿಎಲ್ನ 62ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲ್ಲಿದೆ. ಈ ಪಂದ್ಯದ ಗೆಲುವು ಉಭಯ ತಂಡಗಳಿಗೂ ಅತ್ಯವಶ್ಯಕವಾಗಿದೆ. ಏಕೆಂದರೆ ಎರಡೂ ತಂಡಗಳು ಪ್ಲೇಆಫ್ ಸುತ್ತಿಗೆ ಕಾಲಿಡಬೇಕೆಂದರೆ ಈ ಗೆಲುವು ಅಗತ್ಯವಾಗಿದೆ. ಹೀಗಾಗಿ ಎರಡೂ ತಂಡಗಳು ಗೆಲುವಿಗಾಗಿ ಕಸರತ್ತು ನಡೆಸುತ್ತಿವೆ.
ಆದರೆ ಈ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಘಾತ ಎದುರಾಗಿದೆ. ಐಪಿಎಲ್ ನಿಯಮವನ್ನು ಸತತವಾಗಿ ಉಲ್ಲಂಘಿಸಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ವಿರುದ್ಧ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ. ಅದರಂತೆ ನಾಯಕ ರಿಷಬ್ ಪಂತ್ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗಿದ್ದಾರೆ. ಇದರಿಂದಾಗಿ ಪಂತ್ ಆರ್ಸಿಬಿ ವಿರುದ್ಧದ ಬಹಳ ಮುಖ್ಯವಾದ ಪಂದ್ಯವನ್ನು ಆಡುವಂತಿಲ್ಲ.
ಭಾನುವಾರ, ಮೇ 12 ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆಯಲಿದ್ದು, ಇದಕ್ಕೂ ಒಂದು ದಿನ ಮುಂಚಿತವಾಗಿ ಮಂಡಳಿ ಈ ನಿರ್ಧಾರ ಪ್ರಕಟಿಸಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಐಪಿಎಲ್, ಡೆಲ್ಲಿ ತಂಡ ನಿಧಾನಗತಿಯ ಓವರ್ ನಿಯಮವನ್ನು ಮೂರನೇ ಬಾರಿಗೆ ಉಲ್ಲಂಘಿಸಿದಕ್ಕಾಗಿ ಡೆಲ್ಲಿ ನಾಯಕ ಪಂತ್‌ಗೆ ಈ ಶಿಕ್ಷೆ ವಿಧಿಸಲಾಗಿದೆ ಎಂದು ತಿಳಿಸಿದೆ.
ಈ ಸೀಸನ್ನಲ್ಲಿ ಡೆಲ್ಲಿ ತಂಡ ಮೂರನೇ ಬಾರಿಗೆ ಈ ನಿಯಮ ಉಲ್ಲಂಘಿಸಿದೆ. ನಿಯಮಗಳ ಪ್ರಕಾರ, ಮೊದಲ ಮತ್ತು ಎರಡನೇ ಬಾರಿಗೆ ಈ ನಿಯಮ ಉಲ್ಲಂಘಿಸಿದರೆ ನಾಯಕ ಮತ್ತು ತಂಡದ ಆಟಗಾರರಿಗೆ ದಂಡ ವಿಧಿಸಲಾಗುತ್ತದೆ. ಆದರೆ ಮೂರನೇ ಬಾರಿಯೂ ಈ ತಪ್ಪನ್ನು ಪುನರಾವರ್ತಿಸಿದರೆ ತಂಡದ ನಾಯಕನನ್ನು 1 ಪಂದ್ಯದಿಂದ ನಿಷೇಧಿಸಲಾಗುತ್ತದೆ.
ವಾಸ್ತವವಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ನಿಧಾನಗತಿಯ ಓವರ್ರೇಟ್ ನಿಯಮ ಉಲ್ಲಂಘಿಸಿದಕ್ಕಾಗಿ ಮ್ಯಾಚ್ ರೆಫರಿ ಪಂತ್‌ಗೆ ಈ ಶಿಕ್ಷೆ ನೀಡಿದ್ದಾರೆ. ಈ ನಿರ್ಧಾರದ ವಿರುದ್ಧ ಡೆಲ್ಲಿ ಫ್ರಾಂಚೈಸಿ ಮೇಲ್ಮನವಿ ಸಲ್ಲಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಂತರ ಬಿಸಿಸಿಐ ಓಂಬುಡ್ಸ್‌ಮನ್ ಅದರ ಬಗ್ಗೆ ವರ್ಚುವಲ್ ವಿಚಾರಣೆ ನಡೆಸಿದ್ದರು.
ಇಲ್ಲಿಯೂ ಕೂಡ ಡೆಲ್ಲಿ ಮತ್ತು ಪಂತ್‌ಗೆ ರಿಲೀಫ್ ಸಿಗಲಿಲ್ಲ. ಏಕೆಂದರೆ ವಿಚಾರಣೆಯ ಬಳಿಕ ಮ್ಯಾಚ್ ರೆಫರಿಯ ನಿರ್ಧಾರವನ್ನು ಎತ್ತಿಹಿಡಿಯಲಾಗಿದೆ. ಈ ಮೂಲಕ ಪಂತ್‌ಗೆ ಒಂದು ಪಂದ್ಯದ ಅಮಾನತು ಮಾತ್ರವಲ್ಲದೆ 30 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಪಂತ್ ಮಾತ್ರವಲ್ಲದೆ, ಆಡುವ ಹನ್ನೊಂದರ ಭಾಗವಾಗಿದ್ದ ಇತರ ಆಟಗಾರರು ಮತ್ತು ಇಂಪ್ಯಾಕ್ಟ್ ಆಟಗಾರನಿಗೂ 12 ಲಕ್ಷ ರೂಪಾಯಿ ಅಥವಾ ಪಂದ್ಯದ ಶುಲ್ಕದ 50 ಪ್ರತಿಶತ (ಯಾವುದು ಕಡಿಮೆಯೋ ಅದು) ದಂಡ ವಿಧಿಸಲಾಗಿದೆ.
Published On - 5:14 pm, Sat, 11 May 24