- Kannada News Photo gallery Cricket photos IPL 2024: Dinesh Karthik had to face criticism after RCB lost
IPL 2024: DKಯ ಅತಿಯಾದ ಆತ್ವವಿಶ್ವಾಸದಿಂದ ಸೋತ RCB
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2024) 36ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಕಾರಣವಾಗಿತ್ತು. ಆದರೆ ಈ ಹೋರಾಟದಲ್ಲಿ ಆರ್ಸಿಬಿ ಕೇವಲ 1 ರನ್ನಿಂದ ಸೋಲಬೇಕಾಯಿತು. ಈ ಸೋಲಿಗೆ ಮುಖ್ಯ ಕಾರಣ ದಿನೇಶ್ ಕಾರ್ತಿಕ್ ಎಂಬ ವಾದಗಳು ಕೇಳಿ ಬರುತ್ತಿದೆ. ಇದಕ್ಕೆ ಕಾರಣ 19ನೇ ಓವರ್ನಲ್ಲಿ ಡಿಕೆ ತೋರಿಸಿದ ಅತಿಯಾದ ಆತ್ಮವಿಶ್ವಾಸ.
Updated on: Apr 22, 2024 | 11:40 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ಆರ್ಸಿಬಿ ತಂಡವು 7ನೇ ಬಾರಿ ಸೋಲನುಭವಿಸಿದೆ. ಆದರೆ ಈ ಬಾರಿ ಸೋಲಿನ ಅಂತರ ಕೇವಲ 1 ರನ್ ಮಾತ್ರ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಕೊನೆಯ ಎಸೆತದಲ್ಲಿ ಸೋಲನುಭವಿಸಿತು. ಅದು ಕೂಡ ರನೌಟ್ ಆಗುವ ಮೂಲಕ ಎಂಬುದು ವಿಶೇಷ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 222 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ದಿಟ್ಟ ಹೋರಾಟವನ್ನೇ ಪ್ರದರ್ಶಿಸಿತು. ಪರಿಣಾಮ ಆರ್ಸಿಬಿ ತಂಡಕ್ಕೆ ಕೊನೆಯ 12 ಎಸೆತಗಳಲ್ಲಿ 31 ರನ್ಗಳು ಬೇಕಿತ್ತು.

ಅತ್ತ ದಿನೇಶ್ ಕಾರ್ತಿಕ್ ಹಾಗೂ ಕರ್ಣ್ ಶರ್ಮಾ ಕ್ರೀಸ್ನಲ್ಲಿದ್ದರು. ಹೀಗಾಗಿಯೇ ಆರ್ಸಿಬಿ ತಂಡವು ಚೇಸ್ ಮಾಡಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಆ್ಯಂಡ್ರೆ ರಸೆಲ್ ಎಸೆತದ 19ನೇ ಓವರ್ನ ಮೊದಲ ಎರಡು ಎಸೆತಗಳಲ್ಲಿ ದಿನೇಶ್ ಕಾರ್ತಿಕ್ ಯಾವುದೇ ರನ್ ಓಡಿರಲಿಲ್ಲ. ಇನ್ನು ಮೂರನೇ ಎಸೆತದಲ್ಲಿ ಸಿಕ್ಸ್ ಬಾರಿಸಿದರು.

ಆದರೆ 4ನೇ ಎಸೆತದಲ್ಲಿ ರನ್ ಓಡಲು ನಿರಾಕರಿಸಿದರು. 5ನೇ ಎಸೆತದಲ್ಲಿ ಫೋರ್ ಬಾರಿಸಿದರು. ಇನ್ನು ಕೊನೆಯ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಮೂರು ಬಾರಿ 1 ರನ್ ಓಡುವ ಅವಕಾಶವಿದ್ದರೂ ದಿನೇಶ್ ಕಾರ್ತಿಕ್ ಕರ್ಣ್ ಶರ್ಮಾಗೆ ಸ್ಟ್ರೈಕ್ ನೀಡಲು ನಿರಾಕರಿಸಿದ್ದರು.

ಆರ್ಸಿಬಿ ತಂಡದಲ್ಲಿ ಆಲ್ರೌಂಡರ್ ಆಗಿಯೇ ಸ್ಥಾನ ಪಡೆದಿರುವ ಕರ್ಣ್ ಶರ್ಮಾ ಮೇಲೆ ದಿನೇಶ್ ಕಾರ್ತಿಕ್ ಕಿಂಚಿತ್ತೂ ವಿಶ್ವಾಸ ಹೊಂದಿರಲಿಲ್ಲ. ಅಲ್ಲದೆ ತಾನೇ ಫಿನಿಶಿಂಗ್ ಮಾಡುತ್ತೇನೆ ಎಂಬ ಅತಿಯಾದ ಆತ್ವವಿಶ್ವಾಸದಲ್ಲಿ ಡಿಕೆ ಬ್ಯಾಟ್ ಬೀಸಿದ್ದರು.

ಪರಿಣಾಮ 19ನೇ ಓವರ್ನಲ್ಲಿ ಆರ್ಸಿಬಿ 3 ರನ್ಗಳನ್ನು ಕೈಚೆಲ್ಲಿಕೊಂಡಿತು. ಇತ್ತ ಕೊನೆಯ ಓವರ್ನಲ್ಲಿ 21 ರನ್ಗಳ ಗುರಿ ಪಡೆದ ಕರ್ಣ್ ಶರ್ಮಾ ತಾನು ಯಾವುದೇ ಫಿನಿಶರ್ಗೂ ಕಮ್ಮಿ ಇಲ್ಲ ಎಂಬಂತೆ ಮಿಚೆಲ್ ಸ್ಟಾರ್ಕ್ಗೆ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದರು. ಆದರೆ 5ನೇ ಎಸೆತದಲ್ಲಿ ಸ್ಟಾರ್ಕ್ ಹಿಡಿದ ಅದ್ಭುತ ಕ್ಯಾಚ್ನಿಂದಾಗಿ ಕರ್ಣ್ ಶರ್ಮಾ ಹೊರನಡೆಯಬೇಕಾಯಿತು.

ಅಂತಿಮವಾಗಿ ಆರ್ಸಿಬಿ ತಂಡವು 1 ರನ್ನಿಂದ ಸೋಲೊಪ್ಪಿಕೊಂಡಿತು. ಒಂದು ವೇಳೆ ಡಿಕೆ 19ನೇ ಓವರ್ನಲ್ಲಿ 3 ಬಾರಿ ಸಿಕ್ಕ ಅವಕಾಶದಲ್ಲಿ ಕನಿಷ್ಠ 1 ರನ್ ಓಡಿದ್ದರೂ ಈ ಪಂದ್ಯದಲ್ಲಿ ಆರ್ಸಿಬಿ ತಂಡಕ್ಕೆ ಗೆಲುವು ದಕ್ಕುತ್ತಿತ್ತು. ಆದರೆ ದಿನೇಶ್ ಕಾರ್ತಿಕ್ ಅವರ ಅತಿಯಾದ ಆತ್ಮವಿಶ್ವಾಸವೇ ಆರ್ಸಿಬಿ ಪಾಲಿಗೆ ಮುಳುವಾಯಿತು.




