IPL 2024: ಲುಕ್ ಬದಲಿಸಿದ ವಿರಾಟ್ ಕೊಹ್ಲಿ: ಬದಲಾಗುತ್ತಾ RCB ಲಕ್
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ಮಾರ್ಚ್ 22 ರಿಂದ ಶುರುವಾಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ನ ಮೊದಲ ಪಂದ್ಯದಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ತಂಡಗಳು ಕಣಕ್ಕಿಳಿಯಲಿದೆ. ಸಾಂಪ್ರದಾಯಿಕ ಎದುರಾಳಿಗಳ ನಡುವಣ ಈ ಹೈವೋಲ್ಟೇಜ್ ಪಂದ್ಯದೊಂದಿಗೆ IPL 2024 ಶುರುವಾಗಲಿದೆ.
Updated on: Mar 19, 2024 | 12:22 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆರ್ಸಿಬಿ ತಂಡದ ಅನ್ಬಾಕ್ಸ್ ಕಾರ್ಯಕ್ರಮಕ್ಕೂ ಮುಂಚಿತವಾಗಿ ಕೊಹ್ಲಿ ತಮ್ಮ ಹೇರ್ ಸ್ಟೈಲ್ ಬದಲಿಸಿಕೊಂಡಿದ್ದು, ಈ ಮೂಲಕ ಹೊಸ ಅವತಾರದಲ್ಲಿ ಮಿಂಚಿದ್ದಾರೆ.

ಇದೀಗ ಕಿಂಗ್ ಕೊಹ್ಲಿಯ ನ್ಯೂ ಹೇರ್ಸ್ಟೈಲ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೆ ವಿರಾಟ್ನ ಹೊಸ ಲುಕ್ನೊಂದಿಗೆ ಆರ್ಸಿಬಿ ತಂಡದ ಲಕ್ ಕೂಡ ಬದಲಾಗಲಿದೆಯಾ ಎಂಬ ಚರ್ಚೆಗಳು ಸಹ ಶುರುವಾಗಿದೆ.

ಏಕೆಂದರೆ ಕಿಂಗ್ ಕೊಹ್ಲಿ ಕಳೆದ 16 ಸೀಸನ್ಗಳಿಂದ ಆರ್ಸಿಬಿ ಪರ ಕಣಕ್ಕಿಳಿದಿದ್ದಾರೆ. ಈ ವೇಳೆ 237 ಪಂದ್ಯಗಳನ್ನಾಡಿದ್ದ್ದು, 7263 ರನ್ ಕಲೆಹಾಕಿದ್ದಾರೆ. ಇದಾಗ್ಯೂ ಕಿಂಗ್ ಕೊಹ್ಲಿ ಪಾಲಿಗೆ ಐಪಿಎಲ್ ಟ್ರೋಫಿ ಮರೀಚಿಕೆಯಾಗಿಯೇ ಉಳಿದಿದೆ.

ಆರ್ಸಿಬಿ ತಂಡವು 2009, 2011 ರಲ್ಲಿ ಫೈನಲ್ ಪ್ರವೇಶಿಸಿದರೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇನ್ನು 2016 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ರಾಯಲ್ ಪಡೆ ಫೈನಲ್ ಆಡಿದರೂ, ಕೇವಲ 8 ರನ್ಗಳಿಂದ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳುವ ಅವಕಾಶವನ್ನು ಕೈಚೆಲ್ಲಿಕೊಂಡಿತು.

ಇದಾದ ಬಳಿಕ ಆರ್ಸಿಬಿ ತಂಡವು ಒಮ್ಮೆಯೂ ಫೈನಲ್ಗೆ ಪ್ರವೇಶಿಲ್ಲ. ಹೀಗಾಗಿಯೇ ಕೊಹ್ಲಿಯ ನ್ಯೂ ಲುಕ್ನೊಂದಿಗೆ ಆರ್ಸಿಬಿ ತಂಡ ಲಕ್ ಕೂಡ ಬದಲಾಗಲಿ ಎಂದು ಅಭಿಮಾನಿಗಳು ಬಯಸಿದ್ದಾರೆ.

ಅಂದಹಾಗೆ ವಿರಾಟ್ ಕೊಹ್ಲಿಯ ಲುಕ್ಗೆ ಹೊಸ ಟಚ್ ನೀಡಿದ್ದು ಮತ್ಯಾರೂ ಅಲ್ಲ. ಖ್ಯಾತ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್. ಈ ಹಿಂದೆ ಧೋನಿ, ಚಹಲ್ ಸೇರಿದಂತೆ ಟೀಮ್ ಇಂಡಿಯಾದ ಹಲವು ಆಟಗಾರರ ಲುಕ್ ಬದಲಿಸಿದ್ದ ಆಲಿಮ್ ಇದೀಗ ವಿರಾಟ್ ಕೊಹ್ಲಿಯನ್ನು ಸಖತ್ ಸ್ಟೈಲಿಸ್ಟ್ ಆಗಿ ತೋರಿಸಿದ್ದಾರೆ.
