IPL 2024: ನಿನ್ನೆ ನಡೆಯಲು ಸಾಧ್ಯವಿರಲಿಲ್ಲ… ಇಂದು ಐಪಿಎಲ್ಗೆ ಎಂಟ್ರಿ..!
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ಆರಂಭಕ್ಕೆ ಇನ್ನು ಉಳಿದಿರುವುದು ಕೇವಲ ದಿನಗಳು ಮಾತ್ರ. ಈಗಾಗಲೇ ಎಲ್ಲಾ ಆಟಗಾರರು ಐಪಿಎಲ್ ಕ್ಯಾಂಪ್ ಸೇರಲು ಆಗಮಿಸಿದ್ದಾರೆ. ಇದೀಗ ಬಾಂಗ್ಲಾದೇಶ್ ತಂಡದ ಎಡಗೈ ವೇಗಿ ಮುಸ್ತಫಿಜುರ್ ರೆಹಮಾನ್ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದಾರೆ.
Updated on: Mar 19, 2024 | 1:53 PM

ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಗಾಯಗೊಂಡು ಮೈದಾನ ತೊರೆದಿದ್ದ ಬಾಂಗ್ಲಾದೇಶ್ ವೇಗಿ ಮುಸ್ತಫಿಜುರ್ ರೆಹಾನ್ ಐಪಿಎಲ್ಗೆ ಆಗಮಿಸಿದ್ದಾರೆ. ಚಟ್ಟೋಗ್ರಾಮ್ನಲ್ಲಿ ನಡೆದ ಈ ಪಂದ್ಯದಲ್ಲಿ 9 ಓವರ್ಗಳನ್ನು ಎಸೆದ ಬಳಿಕ ಮುಸ್ತಫಿಜುರ್ ನಡೆಯಲು ಕಷ್ಟಪಟ್ಟಿದ್ದರು.

ಅಲ್ಲದೆ ಮುಸ್ತಫಿಜುರ್ ರೆಹಮಾನ್ ಅವರನ್ನು ಮೈದಾನದಿಂದ ಸ್ಟ್ರೆಚರ್ ಸಹಾಯದಿಂದ ಕರೆಕೊಂಡು ಹೋಗಲಾಗಿತ್ತು. ಹೀಗಾಗಿ ಅವರು ಸಿಎಸ್ಕೆ ತಂಡದಿಂದ ಹೊರಗುಳಿಯುವ ಸಾಧ್ಯತೆಗಳಿವೆ ಎಂದು ಸುದ್ದಿ ಬಿತ್ತರವಾಗಿತ್ತು.

ಆದರೀಗ ಒಂದೇ ದಿನದಲ್ಲಿ ಮುಸ್ತಫಿಜುರ್ ರೆಹಮಾನ್ ಸಂಪೂರ್ಣ ಫಿಟ್ನೆಸ್ನೊಂದಿಗೆ ಢಾಕಾ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಚೆನ್ನೈನತ್ತ ಪ್ರಯಾಣ ಬೆಳೆಸಿದ್ದಾರೆ. ಈ ಪ್ರಯಾಣದ ನಡುವೆ ಐಪಿಎಲ್ಗೆ ಆಗಮಿಸುತ್ತಿರುವುದಾಗಿ ಖುದ್ದು ಮುಸ್ತಫಿಜುರ್ ರೆಹಮಾನ್ ತಿಳಿಸಿದ್ದಾರೆ.

ಇತ್ತ ಮುಸ್ತಫಿಜುರ್ ಒಂದೇ ದಿನದಲ್ಲಿ ಮತ್ತೆ ಸಂಪೂರ್ಣ ಫಿಟ್ನೆಸ್ನೊಂದಿಗೆ ಕಾಣಿಸಿಕೊಂಡಿರುವ ಬಗ್ಗೆ ಬಾಂಗ್ಲಾದೇಶ್ ಕ್ರಿಕೆಟ್ ಪ್ರೇಮಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಐಪಿಎಲ್ಗಾಗಿ ಮುಂಚಿತವಾಗಿಯೇ ಅವರು ರಾಷ್ಟ್ರೀಯ ತಂಡ ತೊರೆಯಲು ಆಡಿದ ನಾಟಕವಿದು ಎಂದು ಆರೋಪಿಸಿದ್ದಾರೆ.

ಈ ಬಾರಿಯ ಐಪಿಎಲ್ನಲ್ಲಿ ಮುಸ್ತಫಿಜುರ್ ರೆಹಮಾನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ 2 ಕೋಟಿ ರೂ.ಗೆ ಖರೀದಿಸಿದೆ. ಇದೀಗ ಐಪಿಎಲ್ ಆರಂಭಕ್ಕೂ ಮುನ್ನವೇ ಬಾಂಗ್ಲಾ ವೇಗಿ ಸಿಎಸ್ಕೆ ಕ್ಯಾಂಪ್ ಸೇರಲು ಆಗಮಿಸಿದ್ದಾರೆ. ಈ ಮೂಲಕ ಧೋನಿ ನಾಯಕತ್ವದಲ್ಲಿ ಕಣಕ್ಕಿಳಿಯಲು ಮುಸ್ತಫಿಜುರ್ ರೆಹಮಾನ್ ಸಜ್ಜಾಗಿ ನಿಂತಿದ್ದಾರೆ.



















