- Kannada News Photo gallery Cricket photos IPL 2024: Kolkata Knight Riders Won First 3 Matches First Time
IPL 2024: ಕೊನೆಗೂ ಹ್ಯಾಟ್ರಿಕ್ ಗೆಲುವು ಕಂಡ KKR
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ರ ಮೊದಲ ಮೂರು ಪಂದ್ಯಗಳನ್ನು ಗೆದ್ದುಕೊಂಡಿರುವುದು ಕೇವಲ 2 ತಂಡಗಳು ಮಾತ್ರ. ಈ ಪಟ್ಟಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಅಗ್ರಸ್ಥಾನದಲ್ಲಿದ್ದರೆ, ರಾಜಸ್ಥಾನ್ ರಾಯಲ್ಸ್ ತಂಡ ದ್ವಿತೀಯ ಸ್ಥಾನದಲ್ಲಿದೆ. ಈ ಎರಡು ತಂಡಗಳನ್ನು ಹೊರತುಪಡಿಸಿ ಉಳಿದೆಲ್ಲಾ ತಂಡಗಳು ಮೊದಲ ಮೂರು ಮ್ಯಾಚ್ಗಳಲ್ಲಿ ಕನಿಷ್ಠ ಒಂದು ಸೋಲು ಕಂಡಿದೆ.
Updated on: Apr 04, 2024 | 7:28 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಶುರುವಾಗಿ 16 ವರ್ಷಗಳೇ ಕಳೆದಿವೆ. ಇದುವರೆ 16 ಸೀಸನ್ಗಳನ್ನು ಆಡಲಾಗಿದ್ದು, ಇದೀಗ 17ನೇ ಸೀಸನ್ ಚಾಲ್ತಿಯಲ್ಲಿದೆ. ಈ ಎಲ್ಲಾ ಸೀಸನ್ಗಳನ್ನು ಆಡಿದ ತಂಡಗಳಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಕೂಡ ಒಂದು. ಆದರೆ ಕಳೆದ ಹದಿನಾರು ಸೀಸನ್ಗಳಲ್ಲಿ ಒಮ್ಮೆಯೂ ಕೆಕೆಆರ್ ಮೊದಲ ಮೂರು ಪಂದ್ಯಗಳನ್ನು ಗೆದ್ದಿರಲಿಲ್ಲ ಎಂಬುದು ವಿಶೇಷ.

ಆದರೆ ಈ ಬಾರಿ ಕೆಕೆಆರ್ ಬಾಯ್ಸ್ ಹೊಸ ಅಧ್ಯಾಯ ಬರೆದಿದ್ದಾರೆ. ಅದು ಸಹ ಭರ್ಜರಿ ಗೆಲುವುಗಳ ಮೂಲಕ ಎಂಬುದು ವಿಶೇಷ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 4 ರನ್ಗಳ ರೋಚಕ ಜಯದೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿದ್ದ ಕೆಕೆಆರ್, ಆ ಬಳಿಕ ಆರ್ಸಿಬಿ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು.

ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಕೆಕೆಆರ್ 106 ರನ್ಗಳ ಅಮೋಘ ಗೆಲುವು ದಾಖಲಿಸಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಐಪಿಎಲ್ ಸೀಸನ್ನ ಮೊದಲ ಮೂರು ಪಂದ್ಯಗಳನ್ನು ಗೆದ್ದುಕೊಂಡಿದೆ. ಇದರೊಂದಿಗೆ ಕಳೆದ 16 ಸೀಸನ್ಗಳಲ್ಲಿ ಸಾಧ್ಯವಾಗದ ಉತ್ತಮ ಆರಂಭವನ್ನು ಪಡೆಯುವಲ್ಲಿ ಕೆಕೆಆರ್ ಪಡೆ ಯಶಸ್ವಿಯಾಗಿದೆ.

ಸದ್ಯ ಮೂರು ಗೆಲುವುಗಳೊಂದಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದು, ಒಟ್ಟು 6 ಅಂಕಗಳನ್ನು ಹೊಂದಿದೆ. ಹಾಗೆಯೇ ಕೆಕೆಆರ್ ತಂಡದ ಪ್ರಸ್ತುತ ನೆಟ್ ರನ್ ರೇಟ್ +2.518 ಇರುವುದು ವಿಶೇಷ. ಅಂದರೆ ಆರಂಭದಲ್ಲೇ ಉತ್ತಮ ರನ್ ರೇಟ್ ಸಂಪಾದಿಸುವಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಯಶಸ್ವಿಯಾಗಿದೆ.

ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ತನ್ನ ಮುಂದಿನ ಪಂದ್ಯವನ್ನು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಏಪ್ರಿಲ್ 8 ರಂದು ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲೂ ಕೆಕೆಆರ್ ಆಟಗಾರರಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು.
