- Kannada News Photo gallery Cricket photos IPL 2024: Marcus Stoinis makes highest score in an IPL chase
Marcus Stoinis: CSKಯ ಸದ್ದಡಗಿಸಿ ಭರ್ಜರಿ ದಾಖಲೆ ಬರೆದ ಸ್ಟೊಯಿನಿಸ್
IPL 2024: ಐಪಿಎಲ್ 2024 ರ 39ನೇ ಪಂದ್ಯದ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ದಾಂಡಿಗ ಮಾರ್ಕಸ್ ಸ್ಟೊಯಿನಿಸ್ ಹೊಸ ಇತಿಹಾಸ ಬರೆದಿದ್ದಾರೆ. ಅದು ಸಹ 13 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಟೊಯಿನಿಸ್ 63 ಎಸೆತಗಳಲ್ಲಿ ಅಜೇಯ 124 ರನ್ ಬಾರಿಸಿದರು. ಈ ಅಜೇಯ ಶತಕದೊಂದಿಗೆ ಸ್ಟೊಯಿನಿಸ್ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
Updated on: Apr 24, 2024 | 7:52 AM

ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 39ನೇ ಪಂದ್ಯದಲ್ಲಿ ಸ್ಪೋಟಕ ಸೆಂಚುರಿ ಸಿಡಿಸಿ ಮಾರ್ಕಸ್ ಸ್ಟೊಯಿನಿಸ್ ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಪರ ರುತುರಾಜ್ ಗಾಯಕ್ವಾಡ್ (108) ಆಕರ್ಷಕ ಶತಕ ಬಾರಿಸಿದರು. ಈ ಸೆಂಚುರಿ ನೆರವಿನೊಂದಿಗೆ ಸಿಎಸ್ಕೆ ತಂಡವು 20 ಓವರ್ಗಳಲ್ಲಿ 210 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ಪರ ಮಾರ್ಕಸ್ ಸ್ಟೊಯಿನಿಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಸ್ಟೊಯಿನಿಸ್ (124) ಅಜೇಯ ಶತಕ ಸಿಡಿಸಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಜಯ ತಂದುಕೊಡುವಲ್ಲಿ ಯಶಸ್ವಿಯಾದರು.

ವಿಶೇಷ ಎಂದರೆ 124 ರನ್ಗಳೊಂದಿಗೆ ಮಾರ್ಕಸ್ ಸ್ಟೊಯಿನಿಸ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಂದರೆ ಐಪಿಎಲ್ನಲ್ಲಿ ಚೇಸಿಂಗ್ ವೇಳೆ ಅತ್ಯಧಿಕ ರನ್ ಬಾರಿಸಿದ ದಾಖಲೆ ಇದೀಗ ಸ್ಟೊಯಿನಿಸ್ ಪಾಲಾಗಿದೆ.

ಇದಕ್ಕೂ ಮುನ್ನ ಈ ದಾಖಲೆ ಪೌಲ್ ವಾಲ್ತಟಿ ಹೆಸರಿನಲ್ಲಿತ್ತು. 2011 ರಲ್ಲಿ ಸಿಎಸ್ಕೆ ವಿರುದ್ಧ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿದ್ದ ಪೌಲ್ ವಾಲ್ತಟಿ 63 ಎಸೆತಗಳಲ್ಲಿ ಅಜೇಯ 120 ರನ್ ಬಾರಿಸಿ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಸ್ಟೊಯಿನಿಸ್ ಅಳಿಸಿ ಹಾಕಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 63 ಎಸೆತಗಳನ್ನು ಎದುರಿಸಿದ ಮಾರ್ಕಸ್ ಸ್ಟೊಯಿನಿಸ್ 6 ಭರ್ಜರಿ ಸಿಕ್ಸ್, 13 ಫೋರ್ಗಳೊಂದಿಗೆ ಅಜೇಯ 124 ರನ್ ಬಾರಿಸಿ, ಐಪಿಎಲ್ ಇತಿಹಾಸದಲ್ಲಿ ಚೇಸಿಂಗ್ ವೇಳೆ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಮೂಲಕ 13 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಸ್ಟೊಯಿನಿಸ್ ಯಶಸ್ವಿಯಾಗಿದ್ದಾರೆ.
